10ನೇ ತರಗತಿ ಪದ್ಯಪಾಠ-4 ಕೌರವೇಂದ್ರನ ಕೊಂದೆ ನೀನು(10th_Kannada _Poem-Kouravendrana_konde_neenu)

10ನೇ ತರಗತಿ ಪದ್ಯಪಾಠ-4 ಕೌರವೇಂದ್ರನ ಕೊಂದೆ ನೀನು(10th_Kannada _Poem-Kouravendrana_konde_neenu)

 10ನೇ ತರಗತಿ ಪದ್ಯಪಾಠ-4 ಕೌರವೇಂದ್ರನ ಕೊಂದೆ ನೀನು(10th_Kannada _Poem-Kouravendrana_konde_neenu)


ಕುಮಾರವ್ಯಾಸನ ಕಾಲ: ಕ್ರಿ.ಶ. ೧೩೫೦-೧೪೦೦

ಸ್ಥಳ : ಗದುಗಿನ ಕೋಳಿವಾಡ (ಈಗಿನ ಧಾರವಾಡ ಜಿಲ್ಲೆ, ಹುಬ್ಬಳ್ಳಿ ತಾಲೂಕಿನ ಕೋಳಿವಾಡ)

ಆರಾಧ್ಯದೈವ: ಗದುಗಿನ ವೀರನಾರಾಯಣ

ಕೃತಿ: ‘ಕರ್ಣಾಟಭಾರತ ಕಥಾಮಂಜರಿ’ ಇದಕ್ಕೆ ಕನ್ನಡಭಾರತ, ಗದುಗಿನ ಭಾರತ ಎಂಬ ಹೆಸರುಗಳೂ ಇವೆ.

ಕುಮಾರವ್ಯಾಸ ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬ. ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬ ಎಂದರೆ ತಪ್ಪಾಗಲಾರದು. ಕುಮಾರವ್ಯಾಸನ ಮೂಲ ಹೆಸರು ನಾರಣಪ್ಪ. “ಗದುಗಿನ ನಾರಣಪ್ಪ” ಎಂದು ಸಾಮಾನ್ಯವಾಗಿ ಕುಮಾರವ್ಯಾಸ ನನ್ನು ಗುರುತಿಸಲಾಗುತ್ತದೆ. ಈತನ ಕಾವ್ಯ ನಾಮ ಕುಮಾರವ್ಯಾಸ. ವ್ಯಾಸ ಮಹಾಕವಿಯ ಸಂಸ್ಕೃತ ಮಹಾಭಾರತದ ಅತ್ಯದ್ಭುತ ಕನ್ನಡ ರೂಪವನ್ನು ರಚಿಸಿದ್ದರಿಂದ, ವ್ಯಾಸ ಮಹಾಕವಿಯ ಮಾನಸಪುತ್ರ ತಾನೆನ್ನುವ ವಿನೀತ ಭಾವದಿಂದ ನಾರಣಪ್ಪ ಕುಮಾರ ವ್ಯಾಸನಾಗಿದ್ದಾನೆ. ಈ ಹೆಸರು ಕುಮಾರವ್ಯಾಸನಿಗೆ ಅನ್ವರ್ಥವಾಗಿದೆ. ಕುಮಾರವ್ಯಾಸ ಗದುಗಿನ ವೀರನಾರಾಯಣ ದೇಗುಲದಲ್ಲಿನ ಕಂಬದ ಅಡಿಯಲ್ಲೇ ಗದುಗಿನ ಭಾರತವನ್ನು ರಚಿಸಿ ಓದುತ್ತಿದ್ದ ಎಂಬ ಪ್ರತೀತಿ ಸಹ ಇದೆ.

ಕುಮಾರವ್ಯಾಸನ ಕಾಲದ ಬಗ್ಗೆ ಚರ್ಚೆ

ಕುಮಾರವ್ಯಾಸನ ಕಾಲದ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಲೇ ಇವೆ. ಆದರೂ ಕವಿಚರಿತಾಕಾರರು ಕೆಲವು ಸಾಹಿತ್ಯದ ಹಿನ್ನೆಲೆಯಿಂದ ಕುಮಾರವ್ಯಾಸನ ಕಾಲವನ್ನು ನಿರ್ಣಯಿಸಲು ಪ್ರಯತ್ನಿಸಿದ್ದಾರೆ.

ಕುಮಾರವ್ಯಾಸನ ಹೆಸರು ಹೇಳುವ ಉತ್ತರಕಾಲೀನ ಕವಿಗಳಲ್ಲಿ ಮೊದಲಿಗ ತಿಮ್ಮಣ್ಣಕವಿ. ಇವನ ಕಾಲ ಸುಮಾರು ೧೫೧೦. ಇವನು ವಿಜಯನಗರದ ಶ್ರೀಕೃಷ್ಣದೇವರಾಯನ(ಕ್ರಿ.ಶ.೧೫೦೯ ರಿಂದ ೧೫೨೯ರವರೆಗೆ) ಆಜ್ಞಾನುಸಾರ ‘ಕೃಷ್ಣರಾಜ ಭಾರತ’ಎಂಬ ಕೃತಿಯನ್ನು ರಚಿಸಿದ್ದಾನೆ.

ಸುಮಾರು ಕ್ರಿ.ಶ. ೧೫೦೦ ರಲ್ಲಿದ್ದ ‘ತೊರವೆ ರಾಮಾಯಣ’ ಬರೆದ ಕುಮಾರ ವಾಲ್ಮೀಕಿ ಅಥವಾ ತೊರವೆ ನರಹರಿ ಮತ್ತು ‘ಕೃಷ್ಣರಾಯ ಭಾರತ’ ಬರೆದ ತಿಮ್ಮಣ್ಣ ಕವಿ ಕುಮಾರವ್ಯಾಸನನ್ನು ಹೊಗಳಿರುವುದರಿಂದ ಕುಮಾರವ್ಯಾಸನು ಆ ಕಾಲಕ್ಕಿಂತ ಹಿಂದಿನವನೆಂದು ಸಿದ್ಧವಾಗಿದೆ.

ಜೀವಂಧರ ಚರಿತೆ ಬರೆದ ಕ್ರಿ.ಶ. ೧೪೨೪ ರಲ್ಲಿದ್ದ ಭಾಸ್ಕರ ಕವಿಯು ಕುಮಾರವ್ಯಾಸನ ಅನೇಕ ನುಡಿಕಟ್ಟುಗಳನ್ನು ಬಳಸಿ ಅವನಿಂದ ಪ್ರಭಾವಿತನಾಗಿರುವುದರಿಂದ, ಕುಮಾರವ್ಯಾಸನು ಅವನಿಗಿಂತ ಹಿಂದಿನವನೆಂದು ಸಂಶೋಧಕರು ನಿರ್ಧರಿಸಿದ್ದಾರೆ.

ಕುಮಾರವ್ಯಾಸನ ಹೆಸರಿರುವ ಒಂದು ಶಾಸನ ಗದುಗಿನ ವೀರನಾರಾಯಣ ದೇವಸ್ಥಾನಕ್ಕೆ ಸೇರಿದ ಬಾವಿಯ ಎಡಮಗ್ಗುಲ ಗೋಡೆಯ ಮೇಲಿದೆ. ಇದರ ಕಾಲ ಸುಮಾರು ಕ್ರಿ.ಶ. ೨೬-೮-೧೫೩೯ ರಲ್ಲಿ ಬರೆದ ಶಾಸನದಲ್ಲಿ ಕವಿ ಕುಮಾರವ್ಯಾಸಂಗೆ ಪ್ರಸನ್ನನಾದ ಗದುಗಿನ ವೀರ ನಾರಾಯಣನ ಸನ್ನಿಧಿಯಲ್ಲಿ.. ಎಂದು ಕುಮಾರವ್ಯಾಸನ ಹೆಸರನ್ನು ಉಲ್ಲೇಖಿಸಿರುವುದರಿಂದ ಅವನು ಅದಕ್ಕಿಂತ ಹಿಂದಿನವನೆಂದು ಸ್ಪಷ್ಟವಾಗಿದೆ.

ಕುಮಾರವ್ಯಾಸ ಶ್ರೀಕೃಷ್ಣದೇವರಾಯನ ಆಳ್ವಿಕೆಯಲ್ಲಿದ್ದವನೆಂದೂ, ‘ಪ್ರಭುಲಿಂಗಲೀಲೆ’ ಬರೆದ ಚಾಮರಸನ ತಂಗಿಯ ಗಂಡನೆಂದೂ, ಇದರ ಪ್ರಕಾರ ಇವನ ಕಾಲ ಸುಮಾರು ೧೪೩೯ ಆಗುತ್ತದೆಂದು ಕವಿಚರಿತಾಕಾರರು ಅಭಿಪ್ರಾಯ ಪಟ್ಟಿದ್ದಾರೆ.

ಆದ್ದರಿಂದ ಅವನ-ಕುಮಾರವ್ಯಾಸನ ಕಾಲವನ್ನು ಕ್ರಿ.ಶ. ೧೩೫೦-೧೪೦೦ ಎಂದು ನಿರ್ಣಯಿಸಿರುತ್ತಾರೆ. (ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ : ಕುಮಾರವ್ಯಾಸ ಭಾರತ ಸಂಗ್ರಹ ಪ್ರ : ಬಿ.ಎಂ.ಶ್ರೀ. ಪ್ರತಿಷ್ಠಾನ).

ಕುಮಾರವ್ಯಾಸನು ‘ಕರ್ಣಾಟ ಭಾರತ ಕಥಾಮಂಜರಿ’ ರಚಿಸಿ, ವ್ಯಾಸರಾಯರಿಗೆ ತೋರಿಸಿದನೆಂಬ ಐತಿಹ್ಯವಿದೆಯೆಂದು ತಿಳಿಸಿರುವ ಪಂಚಮುಖಿ ಎಂಬ ವಿದ್ವಾಂಸರು- “ಹರಿ ಶರಣರೆನ್ನ ಮನೆಯ ಮೆಟ್ಟಲು ಮನೆ ಪರಮಪಾವನವಾಯಿತು” ಎಂಬ ಸುಳಾದಿಯಲ್ಲಿ ಪುರಂದರದಾಸರು ತಮ್ಮ ಮನೆಗೆ ಕುಮಾರವ್ಯಾಸ ಬಂದುದನ್ನು, ಆತ ತನ್ನ ಕೃತಿಗೆ ಶ್ರೀಕೃಷ್ಣನೇ ಕಥಾನಾಯಕನೆಂದು ಶಾಸ್ತ್ರ ಸಮ್ಮತವಾಗಿ ಹೇಳಿದನೆನ್ನಲಾಗಿದೆ.

ಈ ದಿಶೆಯಲ್ಲಿ ಕುಮಾರವ್ಯಾಸ ಅತಿ ಪ್ರಾಚೀನನೂ ಅಲ್ಲ, ಅರ್ವಾಚೀನನೂ ಅಲ್ಲ. ಮಧ್ಯಕಾಲದವನೆಂದೂ, ಅವನ ಭಾಷಾಶೈಲಿಯ ದೃಷ್ಠಿಯಿಂದ ನಿರ್ವಿವಾದವಾಗಿ ಹೇಳಬಹುದು.

ಕುಮಾರವ್ಯಾಸನ ಊರು

ಹುಟ್ಟೂರು ಈಗಿನ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಕೋಳೀವಾಡವೆಂಬ ಗ್ರಾಮವೆಂದೂ ಅವನ ವಂಶಸ್ಥರು ಈಗಲೂ ಅಲ್ಲಿ ವಾಸಿಸುತ್ತಾರೆಂದೂ ಹೇಳಲಾಗಿದೆ. ಈ ಬಗ್ಗೆ ಸಂಶೋಧನೆ ಮಾಡಿದ ಶ್ರೀ ಎ.ವಿ.ಪ್ರಸನ್ನ, ಕೆ.ಎ.ಎಸ್. ಅವರು ಅವರ ಮನೆಗೆ ಹೋಗಿ ವಿಚಾರ ವಿನಿಮಯ ಮಾಡಿ ಅವರಲ್ಲಿರುವ ಕಾಗದ ಪತ್ರಗಳನ್ನೂ ಕುಮಾರವ್ಯಾಸ ಭಾರತದ ಓಲೆಗರಿ ಪ್ರತಿಗಳನ್ನೂ ಪರಿಶೀಲಿಸಿರುವುದಾಗಿ ತಿಳಿಸಿದ್ದಾರೆ. ಈ ಎಲ್ಲಾ ಪತ್ರಗಳ ಆಧಾರದ ಮೇಲೆ ಕವಿಯ ವಂಶಸ್ಥರು ತಮ್ಮ ವಂಶದ ಚರಿತ್ರೆಯನ್ನು ಈ ರೀತಿ ತಿಳಿಸುತ್ತಾರೆ. ಕುಮಾರವ್ಯಾಸನ ಪೂರ್ವಿಕರಾದ ಚಿನ್ನದ ಕೈ ಮಾಧವರಸಯ್ಯನು ಹಿರೇಹಂದಿಗೋಳ ಗ್ರಾಮದವನಾಗಿದ್ದು ಕೋಳೀವಾಡ ಗ್ರಾಮವನ್ನು ಕ್ರಯಕ್ಕೆ ಪಡೆದು, ಕೋಳೀವಾಡದಲ್ಲಿಯೇ ನೆಲಸಿದ. ಅವರು ಅದ್ವೈತಿಗಳಾಗಿದ್ದು ಹರಿ-ಹರರಲ್ಲಿ ಅಬೇಧವನ್ನು ಕಾಣುವವರು. ಇವರು ಅಗಸ್ತ್ಯ ಗೋತ್ರಕ್ಕೆ ಸೇರಿದವರು. ಈ ಬಗ್ಗೆ ಗದುಗಿನ ಕುಮಾರವ್ಯಾಸ ಸಂಘದ ಅಧ್ಯಕ್ಷರೂ ಆದ ಶ್ರೀ ಎಂ.ಎಚ್. ಹರಿದಾಸ ಅವರು ರಚಿಸಿರುವ ಮಹಾಕವಿ ಕುಮಾರವ್ಯಾಸ (ಪ್ರ.ವಿಕ್ರಮ ಪ್ರಕಾಶನ ಗದಗ) ಕಿರು ಹೊತ್ತಿಗೆಯಲ್ಲಿ ಹೆಚ್ಚನ ವಿಷಯವಿದೆ. ಅವನ ವಂಶಸ್ಥರಾದ ದತ್ತಾತ್ರೇಯ ಪಾಟೀಲರು ಶ್ರೀ ಎ.ವಿ.ಪ್ರಸನ್ನ ಅವರಿಗೆ ಕೊಟ್ಟ ಕುಮಾರವ್ಯಾಸನ ವಂಶಾವಳಿಯನ್ನು ಗಮಕ ಸಂಪದ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ಒಟ್ಟಿನಲ್ಲಿ ಕವಿ ನಾರಾಯಣಪ್ಪ ಕೋಳಿವಾಡದ ಶಾನುಭೋಗ. ಗದುಗಿನ ವೀರನಾರಾಯಣ ಇವನ ಆರಾಧ್ಯದೈವ. ಇವನಿಗೆ ವೇದವ್ಯಾಸ ಮತ್ತು ಅಶ್ವತ್ಥಾಮರ ಅನುಗ್ರಹವಾಗಿತ್ತೆಂದು ಹೇಳಲಾಗುತ್ತದೆ.

ವಂಶಾವಳಿ

ಈ ವಂಶಾವಳಿಯಂತೆ, ವೀರನಾರಾಯನೆಂಬ ಹೆಸರಿನವರು ಐದು ಜನ ಬರುತ್ತಾರೆ. ಅದರಲ್ಲಿ ವಂಶ ಪ್ರವರ್ತಕ ಚಿನ್ನದ ಕೈ ಮಾಧವರಸಯ್ಯನ ನಂತರ ನಾಲ್ಕನೆಯವನಿಗೆ ೧ನೇ ವೀರನಾರಾಯಣ ಗೌಡ ಎಂದಿದೆ. ಅವನೇ ಕುಮಾರವ್ಯಾಸನೆಂದು ನಿರ್ಧರಿಸಿದ್ದಾರೆ. ಇಲ್ಲಿ ಗೌಡ ಎಂಬ ಪದ ಜಾತಿ ಸೂಚಕವಲ್ಲ. ಅದು ಗ್ರಾಮವೃದ್ಧ > ಗಾಮುಂಡ > ಗೌಡ ಎಂದು ನಿರ್ಣಯಿಸಿದ್ದಾರೆ. ಆನವ್ಮತರ ಕೆಲವು ಅದೇ ಮನೆತನದವರು ಅಯ್ಯ, ಪಾಟೀಲ ಎಂದು ತಮ್ಮ ಹೆಸರಿನ ಕೊನೆಗೆ ಸೇರಿಸಿ ಕೊಂಡಿದ್ದಾರೆ. ವಂಶ ಪ್ರವರ್ತಕ ಚಿನ್ನದ ಕೈ ಮಾಧವರಸಯ್ಯನ ಕಾಲ ಕ್ರಿ.ಶ. ೧೧೪೮. ಇವನ ನಂತರದ ನಾಲ್ಕನೆಯ ತಲೆಮಾರಿನವ ಕುಮಾರವ್ಯಾಸ. ಪ್ರತಿ ತಲೆಮಾರಿಗೆ ೨೫ ವರ್ಷವೆಂದು ಹಿಡಿದರೆ, ಕುಮಾರವ್ಯಾಸನ ಕಾಲ ಕ್ರಿ.ಶ. ೧೨೪೮ . ಅವನು ಸುಮಾರು ೭೦ ವರ್ಷ ಬದುಕಿದ್ದನೆಂದು ಭಾವಿಸಿದರೂ ಕ್ರಿ.ಶ. ೧೨೪೮ ರಿಂದ ೧೩೧೮ ಎಂದರೆ ೩೦-೪೦ ವರ್ಷ ವ್ಯತ್ಯಾಸ ಬರುತ್ತದೆ.

ವಂಶಾವಳಿ :

||ಶ್ರೀ ವೀರನಾರಾಯಣ ಪ್ರಸನ್ನಃ||

೧.ವಂಶ ಪ್ರವರ್ತಕ ಚಿನ್ನದ ಕೈ ಮಾಧವರಸಯ್ಯ.

೨.ತಿರುಮಲಯ್ಯ.

೩. ಲಕ್ಕರಸಯ್ಯ.

೪.ವೀರನಾರಾಯಣ ಗೌಡ.; ಕೃಷ್ಣರಸಯ್ಯ ; ತಂಕರಸಯ್ಯ ; ತಿರುಮಲಯ್ಯ. ಅಶ್ಯತ್ಥಯ್ಯ ?

೪-೧ ನೇ ವೀರನಾರಾಯಣ ನೇ ಕುಮಾರವ್ಯಾಸ

ನಂತರ ೧೯೪೧ ಕ್ಕೆ ೧೯ ತಲೆಮಾರಿನ ಪಟ್ಟಿ ಇದೆ

ಕೃತಿಗಳು

ಕುಮಾರವ್ಯಾಸನ ಅತಿ ಪ್ರಸಿದ್ಧ ಕೃತಿ ಕರ್ಣಾಟ ಭಾರತ ಕಥಾಮಂಜರಿ. ಇದಕ್ಕೆ ಗದುಗಿನ ಭಾರತ, ಕನ್ನಡ ಭಾರತ, ಕುಮಾರವ್ಯಾಸ ಭಾರತ ಎಂದೂ ಹೆಸರು. ಮಹಾಕವಿ ವ್ಯಾಸರ ಸಂಸ್ಕೃತ ಮಹಾಭಾರತದ ಕನ್ನಡಾನುವಾದ ಎನ್ನಬಹುದು. ಆದರೆ ಕೇವಲ ಅನುವಾದವಾಗಿ ಉಳಿಸದೆ ಕುಮಾರವ್ಯಾಸ ತನ್ನ ಕಾವ್ಯಸಾಮರ್ಥ್ಯವನ್ನು ಈ ಕೃತಿಯಲ್ಲಿ ಸಂಪೂರ್ಣವಾಗಿ ಧಾರೆಯೆರೆದಿದ್ದಾನೆ. ಕನ್ನಡ ಸಾಹಿತ್ಯದಲ್ಲಿ ಮೇರುಕೃತಿಯಾಗಿ ಪರಿಗಣಿತವಾಗಿರುವ ಕನ್ನಡ ಭಾರತ, ಸಂಸ್ಕೃತ ಮಹಾಭಾರತದ ಮೊದಲ ಹತ್ತು ಪರ್ವಗಳು, ೧೪೭ ಸಂಧಿ, ೭೯೭೧ ಪದ್ಯಗಳನ್ನು ಒಳಗೊಂಡಿದೆ. ‘ಕುಮಾರವ್ಯಾಸ ಭಾರತ’ದ ಭಾಷೆ ನಡುಗನ್ನಡ.

ಸಂಪೂರ್ಣ ಕಾವ್ಯ ಭಾಮಿನೀ ಷಟ್ಪದಿ ಛಂದಸ್ಸಿನಲ್ಲಿ ರಚಿತವಾಗಿದ್ದು ಕುಮಾರವ್ಯಾಸನ ಕಾವ್ಯ ಪ್ರತಿಭೆ ಓದುಗರನ್ನು ದಂಗುಬಡಿಸುತ್ತದೆ. ಅವನ ಕಾವ್ಯಪ್ರತಿಭೆ ಪೂರ್ಣಶಕ್ತಿಯಲ್ಲಿ ಹೊರಹೊಮ್ಮುವುದು ಅವನ ರೂಪಕಗಳಲ್ಲಿ. ಕುಮಾರವ್ಯಾಸನ ರೂಪಕಗಳ ವೈವಿಧ್ಯತೆ ಮತ್ತು ಆಳ ಅಪಾರವಾದದ್ದು. ಇದೇ ಕಾರಣಕ್ಕಾಗಿ ಕುಮಾರವ್ಯಾಸನ ಹೆಸರು ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂದೇ ಖ್ಯಾತಿ ಪಡೆದಿದೆ. ಉದಾಹರಣೆಗೆ ಪರಿಶೀಲಿಸಿ:

“ಬವರವಾದರೆ ಹರನ ವದನಕೆ ಬೆವರ ತಹೆನು” (ಅಭಿಮನ್ಯುವಿನ ವೀರೋಕ್ತಿ!)

“ನರಶರದ ಜುಂಜುವೊಳೆಯಲಿ ಜಾರುವನೆ ಜಾಹ್ನವೀಧರ” (ಕಿರಾತಾರ್ಜುನೀಯ ಪ್ರಸಂಗದಲ್ಲಿ)

“ಜವನ ಮೀಸೆಯ ಮುರಿದನೋ” (ಉತ್ತರನ ಪೌರುಷದಲ್ಲಿ)

“ಅರಿವಿನ ಸೆರಗು ಹಾರಿತು”

ರೂಪಕಗಳೊಂದಿಗೆ ಕುಮಾರವ್ಯಾಸನ ಇನ್ನೊಂದು ಸಾಮರ್ಥ್ಯ ಮಾನವಪ್ರಕೃತಿಯ ವರ್ಣನೆ. ಕುಮಾರವ್ಯಾಸನ ಪಾತ್ರಗಳು ಕಣ್ಣಿಗೆ ಕಟ್ಟುವಷ್ಟು ಸ್ಪಷ್ಟ. ಅವನ ಎಲ್ಲ ಪಾತ್ರಗಳು ಅವರವರದೇ ರೀತಿಯಲ್ಲಿ ಮಾತನಾಡುತ್ತಾರೆ, ಬೈಯುತ್ತಾರೆ, ನಗುತ್ತಾರೆ, ಹಾಗೂ ಅಳುತ್ತಾರೆ ಸಹ. ಕುಮಾರವ್ಯಾಸ ಅಷ್ಟೇ ಆಳವಾದ ದೈವಭಕ್ತ ಸಹ. ಶ್ರೀ ಕೃಷ್ಣನ ವರ್ಣನೆ ಅವನ ಕಾವ್ಯರಚನೆಯ ಮೂಲೋದ್ದೇಶಗಳಲ್ಲಿ ಒಂದು. (“ತಿಳಿಯ ಹೇಳುವೆ ಕೃ‍ಷ್ಣ ಕಥೆಯನು”) ಅವನ ಮಹಾಭಾರತ ಕಥೆ ಕೃಷ್ಣನ ಸುತ್ತಲೂ ಸುತ್ತುತ್ತದೆ. ಕುಮಾರವ್ಯಾಸ ಕೃಷ್ಣನ ಭಕ್ತ. ಮಹಾಭಾರತದ ಹದಿನೆಂಟು ಪರ್ವಗಳಲ್ಲಿ ಹತ್ತರ (ಗದಾಪರ್ವ) ವರೆಗೆ. ಬರೆದು ದುರ್ಯೋಧನನ ಅವಸಾನದ ನಂತರ, ಕುಮಾರವ್ಯಾಸನು ಮುಂದೆ ಸಂಕ್ಷಿಪ್ತವಾಗಿ, ಶ್ರೀಕೃಷ್ಣನು ಧರ್ಮರಾಜನಿಗೆ ಪಟ್ಟಾಭಿಷೇಕವನ್ನು ಮಾಡಿಸಿ ದ್ವಾರಕೆಗೆ ಹಿಂದಿರುಗುವವರೆಗೆ ಬರೆದಿದ್ದಾನೆ;

ಕುಮಾರವ್ಯಾಸನ ಪ್ರತಿಭೆಗೆ ಕನ್ನಡಿಯಾಗಿ ಹಿಡಿದ ಕುವೆಂಪು ರವರ ಸಾಲುಗಳನ್ನು ನೋಡಿ:

“ಕುಮಾರ ವ್ಯಾಸನು ಹಾಡಿದನೆಂದರೆ

ಕಲಿಯುಗ ದ್ವಾಪರವಾಗುವುದು

ಭಾರತ ಕಣ್ಣಲಿ ಕುಣಿವುದು! ಮೈಯಲಿ

ಮಿಂಚಿನ ಹೊಳೆ ತುಳುಕಾಡುವುದು!“

ಕುಮಾರವ್ಯಾಸನ ಇನ್ನೊಂದು ಕೃತಿ ಐರಾವತ. ಇದು ಅಷ್ಟಾಗಿ ಪ್ರಸಿದ್ಧವಾಗಿಲ್ಲ.

ಪ್ರಭಾವ

ಕುಮಾರವ್ಯಾಸ ಕನ್ನಡ ಸಾಹಿತ್ಯದ ಬೆಳವಣಿಗೆಯ ಮೇಲೆ ಬಹಳಷ್ಟು ಪ್ರಭಾವ ಬೀರಿದ್ದಾನೆ. ಕುಮಾರವ್ಯಾಸ ಭಾರತವನ್ನು ಇಂದಿಗೂ ಸಹ ಕರ್ನಾಟಕದಲ್ಲಿ ಓದಲಾಗುತ್ತದೆ, ವ್ಯಾಖ್ಯಾನ ಮಾಡಲಾಗುತ್ತದೆ. ಕುಮಾರವ್ಯಾಸ ಭಾರತವನ್ನು ಓದುವ ಒಂದು ವಿಶಿಷ್ಟ ಶೈಲಿಯಾದ ಗಮಕ ಕಲೆ ಸಾಕಷ್ಟು ಪ್ರಸಿದ್ಧವಾಗಿದೆ.

“ಹಲಗೆ ಬಳಪವ ಪಿಡಿಯದೊಂದ

ಗ್ಗಳಿಕೆ ಪದವಿಟ್ಟಳುಪದೊಂದ

ಗ್ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ

ಬಳಸಿ ಬರೆಯಲು ಕಂಠಪತ್ರದ

ವುಲುಹುಗೆಡದಗ್ಗಳಿಕೆಯೆಂಬೀ

ಬಲುಹು ವೀರನಾರಾಯಣನ ಕಿಂಕರಗೆ”


“ವೀರನಾರಾಯಣನೆ ಕವಿ ಲಿಪಿ

ಕಾರ ಕುಮಾರವ್ಯಾಸ ಕೇಳುವ

ಸೂರಿಗಳು ಸನಕಾದಿಗಳು ಜಂಗಮ ಜನಾರ್ಧನರು

ಚಾರು ಕವಿತೆಯ ಬಳಕೆಯಲ್ಲ ವಿ

ಚಾರಿಸುವಡಳವಲ್ಲ ಚಿತ್ತವ

ಧಾರು ಹೋ ಸರ್ವಜ್ಞರಾದರು ಸಲುಗೆ ಬಿನ್ನಪವ”


ಕೌರವೇಂದ್ರನ ಕೊಂದೆ ನೀನು ಪದ್ಯದ ಸಾರಾಂಶ

ಪೂರ್ವಕಥೆ(ಹಿನ್ನೆಲೆ)

             ''ದಾಯಾದಿ ಮತ್ಸರ ಸರ್ವ ನಾಶಕ್ಕೆ ಹೇತು'' ಎಂಬ ಮಾತಿನಂತೆ ಕೌರವರು ಮತ್ತು ಪಾಂಡವರ ನಡುವೆ ವೈಮನಸ್ಯ ಬೆಳೆದು ಹೆಮ್ಮರವಾಗಿ ಮೋಸದ ಪಗಡೆಯಾಟವಾಡಿ ಕೌರವರು ಪಾಂಡವರನ್ನು ರಾಜ್ಯಭ್ರಷ್ಟರಾಗಿ ಮಾಡಿದರು. ಪಾಂಡವರು ಹನ್ನೆರಡು ವರ್ಷ ವನವಾಸ ಮತ್ತು ಒಂದು ವರ್ಷದ ಅಜ್ಞಾತವಾಸವನ್ನು ಅನುಭವಿಸುವ ಸಂದರ್ಭ ಎದುರಾಯಿತು. ವನವಾಸ ಮತ್ತು ಅಜ್ಞಾತವಾಸದ ಸಂದರ್ಭದಲ್ಲಿಯೂ ಕೌರವರಿಂದ ಎದುರಾದ ಎಲ್ಲ ತೊಂದರೆಗಳನ್ನೂ ಎದುರಿಸಿ, ಅದನ್ನು ಯಶಸ್ವಿಯಾಗಿ ಮುಗಿಸಿ ಬಂದ ಪಾಂಡವರು ತಮ್ಮ ಪಾಲಿನ ರಾಜ್ಯವನ್ನು ಕೇಳಲು ಕೌರವರ ಬಳಿ ಬಂದಾಗ ದುರ್ಯೋಧನನನು ‘ಒಂದು ಸೂಜಿಯ ಮೊನೆಯಷ್ಟು ಭೂಮಿಯನ್ನೂ ಕೊಡುವುದಿಲ್ಲ ಎಂದು ಪ್ರತಿಕ್ರಿಯಿಸಿದನು. 

           ಆದ್ದರಿಂದ ರಾಜ್ಯವನ್ನು ಮರಳಿ ಪಡೆಯಲೋಸುಗ ಕೌರವರ ಬಳಿಗೆ ಧರ್ಮರಾಯನು ಸಂಧಾನಕ್ಕಾಗಿ ಶ್ರೀ ಕೃಷ್ಣನನ್ನು ಕಳುಹಿಸುತ್ತಾನೆ. ಶ್ರೀಕೃಷ್ಣನು ವಿದುರನ ಮೂಲಕ ದುರ್ಯೋಧನನ ಬಲವನ್ನು ಕುಗ್ಗಿಸುವ ಪ್ರಯತ್ನ ಮಾಡಿದಾಗ ತುಂಬಿದ ಸಭೆಯಲ್ಲಿ ದುರ್ಯೋಧನನು ವಿದುರನನ್ನು ಹೀಗೆಳೆಯುತ್ತಾನೆ. ಕುಪಿತನಾದ ವಿದುರ ತನ್ನ ಬಿಲ್ಲನ್ನು ಮುರಿದು ಯುದ್ಧದಿಂದ ವಿಮುಖನಾಗುತ್ತಾನೆ. ಆದರೆ ಯುದ್ಧ ನಿಲ್ಲಿಸುವ ಸಂಧಾನದ ಪ್ರಯತ್ನ ವಿಫಲವಾಗುತ್ತದೆ. ಯುದ್ಧವೊಂದೇ ಪರಿಹಾರ ಎಂಬ ತೀರ್ಮಾನಕ್ಕೆ ಬಂದಾಗ ಕೌರವ ಸೇನೆಯಲ್ಲಿ ದುರ್ಯೋಧನನಿಗೆ ನಿಷ್ಠನಾಗಿದ್ದು ಪಾಂಡವರನ್ನು ಸೋಲಿಸಬಲ್ಲ ಬಲಶಾಲಿ ಕರ್ಣನಿಂದ ಪಾಂಡವರನ್ನು ರಕ್ಷಿಸಲೇಬೇಕೆಂದು ಸಂಕಲ್ಪ ಮಾಡಿದ ಶ್ರೀಕೃಷ್ಣನು ಅದಕ್ಕಾಗಿ ಉಪಾಯವೊಂದನ್ನು ಸಿದ್ಧಪಡಿಸಿ ತನ್ನೊಂದಿಗೆ ಕರ್ಣನನ್ನು ಕರೆದೊಯ್ಯತ್ತಾನೆ. ಆಗ ಅವರಿಬ್ಬರ ನಡುವೆ ನಡೆದ ಸಂವಾದವೇ ಪ್ರಸ್ತುತ ಭಾಗ.


ಇನತನೂಜನ ಕೂಡೆ ಮೈದುನ

ತನದ ಸರಸವನೆಸಗಿ ರಥದೊಳು

ದನುಜರಿಪು ಬರಸೆಳೆದು ಕುಳ್ಳಿರಿಸಿದನು ಪೀಠದಲಿ

ಎನಗೆ ನಿಮ್ಮಡಿಗಳಲಿ ಸಮಸೇ

ವನೆಯೆ ದೇವ ಮುರಾರಿಯಂಜುವೆ

ವೆನಲು ತೊಡೆ ಸೋಂಕಿನಲಿ ಸಾರಿದು ಶೌರಿಯಿಂತೆಂದ ||೧||


        ರಾಕ್ಷಸ ಸಂಹಾರಕನಾದ (ದನುಜ ರಿಪು) ಕೃಷ್ಣನು ಸೂರ್ಯನ ಮಗ(ಇನತನೂಜ) ನಾದ ಕರ್ಣನೊಡನೆ ಮೈದುನತನದ ಸರಸದಿಂದ (ಪ್ರೀತಿಯಿಂದ) ಬರಸೆಳೆದು ರಥದ ಪೀಠದಲ್ಲಿ ಕುಳ್ಳಿರಿಸಿದನು. ಆಗ ಅದನ್ನು ನಿರೀಕ್ಷಿಸದ ಕರ್ಣನು ''ನಿಮ್ಮೊಡನೆ ನಾನು ಸರಿಸಮಾನನಾಗಿ ಕುಳಿತುಕೊಳ್ಳಬಹುದೇ? ದೇವ ಮುರಾರಿ, ನನಗೇಕೋ ಭಯವಾಗುತ್ತಿದೆ'' ಎಂದು ಹೇಳಲು, ಶ್ರೀಕೃಷ್ಣನು(ಶೌರಿ) ಅವನ ಪಕ್ಕಕ್ಕೆ ತೊಡೆ ಸೋಕುವಂತೆ ಕುಳಿತು ಹೀಗೆಂದನು.


ಭೇದವಿಲ್ಲೆಲೆ ಕರ್ಣ ನಿಮ್ಮೊಳು

ಯಾದವರು ಕೌರವರೊಳಗೆ ಸಂ

ವಾದಿಸುವಡನ್ವಯಕೆ ಮೊದಲೆರಡಿಲ್ಲ ನಿನ್ನಾಣೆ

ಮೇದಿನೀಪತಿ ನೀನು ಚಿತ್ತದೊ

ಳಾದುದರಿವಿಲ್ಲೆನುತ ದಾನವ

ಸೂದನನು ರವಿಸುತನ ಕಿವಿಯಲಿ ಬಿತ್ತಿದನು ಭಯವ ||೨||


          ಕರ್ಣ, ಕೌರವರು ಯಾದವರಿಗೆ ಭೇದವಿಲ್ಲ. ವಿಚಾರ ಮಾಡಿ ನೋಡಿದರೆ ಇಬ್ಬರೂ ಒಂದೇ ವಂಶದವರು. (ಯಯಾತಿಯ ಮಕ್ಕಳು ಪುರು, ಯದು, ಪುರುವಿನ ವಂಶದವರು ಕೌರವರು. ಯದುವಿನ ವಂಶದವರು ಯಾದವರು) ನಿನ್ನಾಣೆಯಾಗಿಯೂ ನೀನೇ ರಾಜ (ಮೇದಿನಿಪತಿ) ಆದರೆ ನಿನಗೆ ಅದರ ಅರಿವಿಲ್ಲ ಎಂದು ಹೇಳುವ ಮೂಲಕ ದಾನವರ ವೈರಿಯಾದ ಶ್ರೀಕೃಷ್ಣನು ರವಿಸುತ (ಕರ್ಣ)ನ ಕಿವಿಯಲ್ಲಿ ಭಯವನ್ನು ಬಿತ್ತಿದನು.


ಲಲನೆ ಪಡೆದೀಯೈದು ಮಂತ್ರಂ

ಗಳಲಿ ಮೊದಲಿಗ ನೀನು ನಿನ್ನಯ

ಬಳಿ ಯುಧಿಷ್ಠಿರದೇವ ಮೂರನೆಯಾತ ಕಲಿಭೀಮ

ಫಲುಗುಣನು ನಾಲ್ಕನೆಯಲೈದನೆ

ಯಲಿ ನಕುಲ ಸಹದೇವರಾದರು

ಬಳಿಕ ಮಾದ್ರಿಯಲೊಂದು ಮಂತ್ರದೊಳಿಬ್ಬರುದಿಸಿದರು ||೩||


       ಪಾಂಡವರ ತಾಯಿಯಾದ ಕುಂತಿಯು ದೂರ್ವಾಸ ಮುನಿಗಳಿಂದ ಪಡೆದ ಐದು ಮಂತ್ರಗಳಲ್ಲಿ ನೀನು ಮೊದಲನೆಯವನು, ನಿನ್ನ ನಂತರದಲ್ಲಿ ಜನಿಸಿದವನು ಯುಧಿಷ್ಠಿರ(ಧರ್ಮತರಾಯ), ಮೂರನೆಯವನು ಶೂರನಾದ ಭೀಮನು, ಅರ್ಜುನನು(ಫಲುಗುಣ) ನಾಲ್ಕನೆಯವನು ಆನಂತರದಲ್ಲಿ ಮಾದ್ರಿಯಲ್ಲಿ (ಪಾಂಡುವಿನ ಎರಡನೇ ಪತ್ನಿಗೆ ಮೊದಲ ಪತ್ನಿಯಾದ ಕುಂತಿಯು ದಯಪಾಲಿಸಿದ ಒಂದು ಮಂತ್ರದ ಕೃಪೆಯಿಂದ) ಒಂದು ಮಂತ್ರದಿಂದ ನಕುಲ ಸಹದೇವರು ಜನಿಸಿದರು ಎಂದು ಶ್ರೀ ಕೃಷ್ಣನು ಕರ್ಣನಿಗೆ ಅವನ ಜನ್ಮ ವೃತ್ತಾಂತವನ್ನು ಹೇಳಿದನು .


ನಿನಗೆ ಹಸ್ತಿನಪುರದ ರಾಜ್ಯದ

ಘನತೆಯನು ಮಾಡುವೆನು ಪಾಂಡವ

ಜನಪ ಕೌರವ ಜನಪರೋಲೈಸುವರು ಗದ್ದುಗೆಯ

ನಿನಗೆ ಕಿಂಕರವೆರಡು ಸಂತತಿ

ಯೆನಿಸಲೊಲ್ಲದೆ ನೀನು ದುರಿಯೋ

ಧನನ ಬಾಯ್ದಂಬುಲಕೆ ಕೈಯಾನುವರೆ ಹೇಳೆಂದ ||೪||


         ನಿನಗೆ ಹಸ್ತಿನಾಪುರದ(ಹಸ್ತನಾವತಿ) ರಾಜನ ಹಿರಿಮೆಯನ್ನುಕೊಡಿಸುವೆನು. ಪಾಂಡವ ಕೌರವ ರಾಜರೆಲ್ಲರೂ ನಿನ್ನನ್ನು ಓಲೈಸುವರು. ಈ ಎರಡೂ ಸಂತತಿಯವರೂ ನಿನಗೆ ಸೇವಕರೆನಿಸಿಕೊಳ್ಳುವ ಹಿರಿಮೆಯನ್ನು ತಿರಸ್ಕರಿಸಿ ನೀನು ದುರ್ಯೋಧನನ ಬಾಯ್ದಂಬುಲಕೆ(ಬಾಯಿಯಲ್ಲಿ ಅಗಿದು ಉಗುಳುವ ತಾಂಬೂಲ) ಕೈಯೊಡ್ಡುವುದು ಸರಿಯೇ ? ಹೇಳು ಎಂದು ಶ್ರೀಕೃಷ್ಣನು ಕರ್ಣನನ್ನು ಪ್ರಶ್ನಿಸುತ್ತಾನೆ.


ಎಡದ ಮೈಯಲಿ ಕೌರವೇಂದ್ರರ

ಗಡಣ ಬಲದಲಿ ಪಾಂಡು ತನಯರ

ಗಡಣವಿದಿರಲಿ ಮಾದ್ರ ಮಾಗಧ ಯಾದವಾದಿಗಳು

ನಡುವೆ ನೀನೋಲಗದೊಳೊಪ್ಪುವ

ಕಡು ವಿಲಾಸವ ಬಿಸುಟು ಕುರುಪತಿ

ನುಡಿಸೆ ಜೀಯ ಹಸಾದವೆಂಬುದು ಕಷ್ಟ ನಿನಗೆಂದ ||೫||

         ನಿನ್ನ ಎಡ ಭಾಗದಲ್ಲಿ ಕೌರವನ ಸಮೂಹದವರು, ಬಲ ಭಾಗದಲ್ಲಿ ಪಾಂಡವರ ಸಮೂಹ (ಪಾಂಡು ರಾಜನ ಮಕ್ಕಳು), ಇದಿರಿನಲ್ಲಿ ಮಾದ್ರಿ, ಮಾಗಧ, ಯಾದವಾದಿಗಳು ಇವರೆಲ್ಲರ ನಡುವೆ ನೀನು ಓಲಗದಲ್ಲಿ ಶೋಭಿಸುವ ನೀನು ಇಂತಹ ಮಹಾಸೌಭಾಗ್ಯವನ್ನು ಅತ್ತ ಎಸೆದು ಕುರುಪತಿ (ಕೌರವ/ದುರ್ಯೋಧನ) ನಿನಗೇನಾದರೂ ಹೇಳಿದರೆ 'ಜೀಯಾ, ಮಹಾಪ್ರಸಾದ' ಎಂದು ಒಪ್ಪಿಕೊಳ್ಳುವುದು ನಿನಗೆ ಕಷ್ಟವಾಗುವುದು ಎಂದು ಶ್ರೀಕೃಷ್ಣನು ಕರ್ಣನಿಗೆ ಹೇಳಿದನು.


ಕೊರಳ ಸೆರೆ ಹಿಗ್ಗಿದವು ದೃಗುಜಲ

ಉರವಣಿಸಿ ಕಡು ನೊಂದನಕಟಾ

ಕುರುಪತಿಗೆ ಕೇಡಾದುದೆಂದನು ತನ್ನ ಮನದೊಳಗೆ

ಹರಿಯ ಹಗೆ ಹೊಗೆದೋರದುರುಹದೆ

ಬರಿದೆ ಹೋಹುದೆ ತನ್ನ ವಂಶದ

ನರುಹಿ ಕೊಂದನು ಹಲವು ಮಾತೇನೆಂದು ಚಿಂತಿಸಿದ ||೬||            ಕರ್ಣನ ಕೊರಳ ನರಗಳು ಹಿಗ್ಗಿದವು (ಗದ್ಗದ) ಕಣ್ಣಿರು ಧಾರೆಯಾಗಿ ಸುರಿಯಿತು. ಅವನು ಬಹಳವಾಗಿ ನೊಂದು ''ಅಯ್ಯೋ! ಕುರುಪತಿಗೆ ಕೇಡಾಯಿತು'' ಎಂದು ತನ್ನ ಮನದೊಳಗೆ ಅಂದುಕೊಂಡು ''ಕೃಷ್ಣನ ದ್ವೇಷದ ಬೆಂಕಿ ಹೊಗೆಯಾಡಿದ ಮೇಲೆ ಅದು ಪೂರ್ತಿಯಾಗಿ ಸುಡದೆ ಹಾಗೇ ಬಿಡುವುದೇ? ಬರಿದೆ ನನ್ನ ಜನ್ಮವೃತ್ತಾಂತವನ್ನು ಹೇಳಿ ಕೊಂದನು. ಹೆಚ್ಚು ಮಾತೇನು?'' ಎಂದು ಚಿಂತಿಸಿದನು .


ಏನು ಹೇಳೈ ಕರ್ಣ ಚಿತ್ತ

ಗ್ಲಾನಿ ಯಾವುದು ಮನಕೆ ಕುಂತೀ

ಸೂನುಗಳ ಬೆಸಕೈಸಿಕೊಂಬುದು ಸೇರದೆ

ಹಾನಿಯಿಲ್ಲೆನ್ನಾಣೆ ನುಡಿ ನುಡಿ

ಮೌನವೇತಕೆ ಮರುಳುತನ ಬೇ

ಡಾನು ನಿನ್ನಪದೆಸೆಯೆ ಬಯಸುವನಲ್ಲ ಕೇಳೆಂದ ||೭||


        (ಕರ್ಣನು ಮನಸ್ಸಿನಲ್ಲಿ ಚಿಂತಿಸುತ್ತಿರುವುದನ್ನು ನೋಡಿ) ಏನು ಹೇಳು ಕರ್ಣ? ನಿನ್ನ ಮನಸ್ಸಿನ ಜಡತ್ವಕ್ಕೆ, ವ್ಯಾಕುಲತೆಗೆ ಕಾರಣವೇನು? ಕುಂತಿಪುತ್ರರಿಂದ ಸೇವೆ ಮಾಡಿಸಿಕೊಳ್ಳುವುದು ನಿನಗೆ ಇಷ್ಟವಾಗುವುದಿಲ್ಲವೇ? ನನ್ನಾಣೆ, ಏನೂ ಹಾನಿ ಇಲ್ಲ, ಮಾತನಾಡು. ಮೌನವೇಕೆ? ಈ ದಡ್ಡತನ ಬೇಡ, ನಿನ್ನ ಹಾನಿಯನ್ನು(ಅಪದೆಸೆ, ಕೇಡು) ನಾನು ಬಯಸುವವನಲ್ಲ; ಕೇಳು.” ಎಂದು ಕೃಷ್ಣನು ಕರ್ಣನಿಗೆ ಸಾಂತ್ವನ ಹೇಳುತ್ತಾನೆ.


ಮರುಳು ಮಾಧವ ಮಹಿಯ ರಾಜ್ಯದ

ಸಿರಿಗೆ ಸೋಲುವನಲ್ಲ ಕೌಂತೇ

ಯರು ಸುಯೋಧನರೆನಗೆ ಬೆಸಕೈವಲ್ಲಿ ಮನವಿಲ್ಲ.

ಹೊರೆದ ದಾತಾರಂಗೆ ಹಗೆವರ

ಶಿರವನರಿದೊಪ್ಪಸುವೆನೆಂಬೀ

ಭರದೊಳಿರ್ದೆನು ಕೌರವೇಂದ್ರನ ಕೊಂದೆ ನೀನೆಂದ ||೮||


           “ಅಯ್ಯೋ ಮರುಳು ಕೃಷ್ಣನೇ, ಈ ಭೂಮಿ ರಾಜ್ಯದ ಸಂಪತ್ತಿಗೆ ನಾನು ಸೋಲುವವನಲ್ಲ. ಕೌಂತೇಯರು(ಪಾಂಡವರು), ಕೌರವರು ನನಗೆ ಸೇವೆ ಮಾಡಬೇಕೆನ್ನುವುದರಲ್ಲಿ ನನಗೆ ಯಾವುದೇ ಆಸಕ್ತಿಯಿಲ್ಲ(ಇಚ್ಛೆಯಿಲ್ಲ). ನನ್ನನ್ನು ಸಲಹಿದ ನನ್ನ ಒಡೆಯನಿಗೆ (ದಾತಾರ-ದಾತೃ) ‘ಶತ್ರುಗಳ ತಲೆಯನ್ನು ಕಡಿದು ಒಪ್ಪಿಸುವೆನು’ ಎನ್ನು ಆತುರದಲ್ಲಿದ್ದೆನು. ಆದರೆ ನೀನು ಕೌರವೇಂದ್ರನನ್ನು ಕೊಂದುಹಾಕಿದೆ” ಎಂದು ಕರ್ಣನು ನೋವಿನಿಂದ ಶ್ರೀಕೃಷ್ಣನಿಗೆ ಹೇಳಿದನು.


ವೀರ ಕೌರವರಾಯನೇ ದಾ

ತಾರನಾತನ ಹಗೆಯ ಹಗೆ ಕೈ

ವಾರವೇ ಕೈವಾರವಾದಂತಹೆನು ಕುರುನೃಪತಿ

ಶೌರಿ ಕೇಳೈ ನಾಳೆ ಸಮರದ

ಸಾರದಲಿ ತೋರುವೆನು ನಿಜಭುಜ

ಶೌರಿಯದ ಸಂಪನ್ನತನವನು ಪಾಂಡುತನಯರಲಿ ||೯||

       ವೀರ ಕೌರವರಾಯನೇ(ದುರ್ಯೋಧನನೇ) ನನಗೆ ಒಡೆಯನು, ಆತನ ಶತ್ರುಗಳೇ ನನ್ನ ಶತ್ರುಗಳು, ಅವನ ಅಭಿಮಾನವೇ (ಹೊಗಳಿಕೆಯೇ) ನನಗೆ ಅಭಿಮಾನ. ಅವನಿಗೆ ಆಗುವುದೇ ನನಗೆ ಆಗಲಿ, ಕೃಷ್ಣನೇ ಕೇಳು, ನಾಳೆ ಯುದ್ಧಭೂಮಿಯಲ್ಲಿ ನನ್ನ ಭುಜಬಲಶೌರ್ಯದ ಪರಾಕ್ರಮವನ್ನು ಪಾಂಡುತನಯ(ಪಾಂಡವರು)ರ ಮೇಲೆ ತೋರುವೆನು ಎಂದು ಕರ್ಣನು ಹೇಳಿದನು.


ಮಾರಿಗೌತಣವಾಯ್ತು ನಾಳಿನ

ಭಾರತವು ಚತುರಂಗ ಬಲದಲಿ

ಕೌರವನ ಋಣ ಹಿಂಗೆ ರಣದಲಿ ಸುಭಟಕೋಟಿಯನು

ತೀರಿಸಿಯೆ ಪತಿಯವಸರಕ್ಕೆ ಶ

ರೀರವನು ನೂಕುವೆನು ನಿನ್ನಯ

ವೀರರೈವರ ನೋಯಿಸೆನು ರಾಜೀವಸಖನಾಣೆ ||೧೦||


          ನಾಳೆ ಬರಲಿರುವ ಭಾರತ(ಮಹಾಭಾರತ)ಯುದ್ಧವು ಮಾರಿಗೆ ಔತಣವಾಗುವುದು. ಆ ಯುದ್ಧದಲ್ಲಿ ಚತುರಂಗ ಬಲವನ್ನು ಸೋಲಿಸಿ, ಅಸಂಖ್ಯಾತ ಯೋಧರನ್ನು ಸಾಯಿಸಿ, ನನ್ನ ಒಡೆಯ ದುರ್ಯೋಧನನಿಗಾಗಿ (ಅವಸರಕ್ಕಾಗಿ=ಸಮಯಕ್ಕಾಗಿ) ನನ್ನ ದೇಹವನ್ನು ಅರ್ಪಿಸುವೆನು(ಪ್ರಾಣಬಿಡುವೆನು) ನಿನ್ನ ಧೀರರಾದ ಪಾಂಡವರನ್ನು ಸೂರ್ಯನಾಣೆಯಾಗಿಯೂ ಯಾವುದೇ ಕಾರಣಕ್ಕೂ ನೋಯಿಸುವುದಿಲ್ಲ ಎಂದು ಕರ್ಣನು ಶ್ರೀಕೃಷ್ಣನಿಗೆ ಹೇಳಿದನು.

 10ನೆಯ ತರಗತಿ ಪದ್ಯ-5-ಹಸುರು(10th-Poem-5-Hasuru-Resource)

10ನೆಯ ತರಗತಿ ಪದ್ಯ-5-ಹಸುರು(10th-Poem-5-Hasuru-Resource)

 10ನೆಯ ತರಗತಿ ಪದ್ಯ-5-ಹಸುರು(10th-Poem-5-Hasuru-Resource)


ಹಸುರು’ ಕವನವು ಆಶ್ವಯುಜ ಮಾಸದ ನವರಾತ್ರಿಯಲ್ಲಿ ಪ್ರಕೃತಿಯಲ್ಲಿ ಹೆಪ್ಪುಗಟ್ಟಿದ ಹಚ್ಚ ಹಸುರನ್ನು ಕಂಡು ಪ್ರೇರಿತವಾದ ಕವನವಾಗಿದೆ. ಇದು ಕುವೆಂಪು ಅವರ ಸ್ಥಳವಾದ ಮಲೆನಾಡಿನ ಕುಪ್ಪಳ್ಳಿಯ ‘ಕವಿಶೈಲ’ದಲ್ಲಿ ಅವರಿಗುಂಟಾದ ಸೌಂದರ್ಯಾನುಭವ. ಪ್ರಕೃತಿ, ಅಲ್ಲಿಯ ಹಸುರುಗಳೊಂದಿಗೆ ಕುವೆಂಪು ಹೊಂದಿದ್ದ ಸಮೀಪ ಸಂಬಂಧವನ್ನು ತೋರಿಸುತ್ತದೆ.  

           ಹಸುರು ಪದ್ಯಭಾಗದ ಸಾರಾಂಶ 

ನವರಾತ್ರಿಯ ನವಧಾತ್ರಿಯ

ಈ ಶ್ಯಾಮಲ ವನಧಿಯಲಿ

ಹಸುರಾದುದೊ ಕವಿಯಾತ್ಮಂ

ರಸಪಾನ ಸ್ನಾನದಲಿ!

   

ಹಸುರಾಗಸ; ಹಸುರು ಮುಗಿಲು;

ಹಸುರು ಗದ್ದೆಯಾ ಬಯಲು;

ಹಸುರಿನ ಮಲೆ; ಹಸುರು ಕಣಿವೆ;

ಹಸುರು ಸಂಜೆಯೀ ಬಿಸಿಲೂ!


ಕವಿಯಾತ್ಮವು ಹಸುರುಗಟ್ಟಲು ಆಶ್ವಯುಜ ಮಾಸದ ನವರಾತ್ರಿಯ ದಿನದಲ್ಲ್ಲಿ ಹೊಸ ಚಿಗುರಿನಿಂದ ಕೂಡಿದ ಭೂಮಿಯಲ್ಲಿ ವಿಶಾಲವಾದ ಶಾಮಲ ಕಡಲು ಹಸುರಾಗಿರುವುದನ್ನು ನೋಡಿ ಕವಿಯ ಆತ್ಮವನ್ನು ರಸಪಾನದಲ್ಲಿ ಮಿಂದಿತು. ಆಗಸದಲ್ಲಿ; ಮುಗಿಲಿನಲ್ಲಿ; ಗದ್ದೆಯ ಬಯಲಿನಲ್ಲಿ; ಬೆಟ್ಟಗುಡ್ಡಗಳಲ್ಲಿ; ಕಣಿವೆಯಲ್ಲಿ; ಸಂಜೆಯ ಬಿಸಿಲಿನಲ್ಲಿ ಎಲ್ಲೆಲ್ಲೂ ಹಸುರು ಹರಡಿತ್ತು.


ಅಶ್ವೀಜದ ಶಾಲಿವನದ

ಗಿಳಿಯೆದೆ ಬಣ್ಣದ ನೋಟ;

ಅದರೆಡೆಯಲಿ ಬನದಂಚಲಿ

ಕೊನೆವೆತ್ತಡಕೆಯ ತೋಟ!


ಅದೊ ಹುಲ್ಲಿನ ಮಕಮಲ್ಲಿನ

ಪೊಸಪಚ್ಚೆಯ ಜಮಖಾನೆ

ಪಸರಿಸಿ ತಿರೆ ಮೈ ಮುಚ್ಚಿರೆ

ಬೇರೆ ಬಣ್ಣವನೆ ಕಾಣೆ!


ಅಶ್ವೀಜ ಮಾಸದಲ್ಲಿ ಬತ್ತದ ಗದ್ದೆಗೆ ಮುತ್ತುವ ಗಿಳಿಗಳ ಹಸುರು ಬಣ್ಣದ ನೋಟ; ಅದರ ಪಕ್ಕದಲ್ಲೇ ಕಾಡಂಚಿನಲ್ಲಿ ಫಲಭರಿತ ಅಡಕೆಯ ತೋಟ; ಹುಲ್ಲಿನ ಮಕಮಲ್ಲಿನ ಹೊಸಪಚ್ಚೆಯ ಜಮಖಾನೆ ಹರಡಿದಂತೆ ಭೂಮಿಯು ಹಸುರಿನಿಂದ ಮೈ ಮುಚ್ಚಿರಲು ಕವಿಗೆ ಬೇರೆ ಬಣ್ಣಗಳೇ ಕಾಣದಾದವು.


ಹೊಸ ಹೂವಿನ ಕಂಪು ಹಸುರು,

ಎಲರಿನ ತಂಪೂ ಹಸುರು!

ಹಕ್ಕಿಯ ಕೊರಲಿಂಪು ಹಸುರು!

ಹಸುರು ಹಸುರಿಳೆಯುಸಿರೂ!


ಹಸುರತ್ತಲ್! ಹಸುರಿತ್ತಲ್!

ಹಸುರೆತ್ತಲ್ ಕಡಲಿನಲಿ

ಹಸುರ‍್ಗಟ್ಟಿತೊ ಕವಿಯಾತ್ಮಂ

ಹಸುರ್‌ನೆತ್ತರ್ ಒಡಲಿನಲಿ!


ಹೊಸ ಹೂವಿನ ಕಂಪು; ತಂಗಾಳಿಯ ತಂಪು; ಹಕ್ಕಿಯ ಇಂಪಾದ ಗಾನ; ಕಡಲು; ಅತ್ತ-ಇತ್ತ-ಎತ್ತ ನೋಡಿದರೂ ಹಸುರು.. ಹಸುರು.. ಹಸರು.. ಇದನ್ನು ನೋಡಿದ ಕವಿಯಾತ್ಮವು ಹಸುರುಗಟ್ಟಿತು. ಕವಿಯ ದೇಹದಲ್ಲೂ ಹಸುರು ರಕ್ತವೇ ಹರಿದಾಡಿತು. ಎಂದು ಹಸುರು ವ್ಯಾಪಿಸಿದ ಬಗೆಯನ್ನು ಕವಿ ಕುವೆಂಪು ಅವರು ವರ್ಣಿಸಿದ್ದಾರೆ.



 10ನೆಯ ತರಗತಿ ಪದ್ಯ-6 ಛಲಮನೆ ಮೆಱೆವೆಂ(10th-Poem-6-Chalamane_merevem-Resource)

10ನೆಯ ತರಗತಿ ಪದ್ಯ-6 ಛಲಮನೆ ಮೆಱೆವೆಂ(10th-Poem-6-Chalamane_merevem-Resource)

 10ನೆಯ ತರಗತಿ ಪದ್ಯ-6 ಛಲಮನೆ ಮೆಱೆವೆಂ(10th-Poem-6-Chalamane_merevem-Resource)


“ಕವಿಜನರಲ್ಲಿ ‘ರತ್ನತ್ರಯ’ (ಎಂದರೆ ಮೂರು ರತ್ನಗಳು) ಎಂದು ಹೆಸರಾದ ಪಂಪ, ಪೊನ್ನಿಗ, ಕವಿರತ್ನ  ಈ ಮೂವರು ಕವಿಗಳು ಜಿನಧರ್ಮವನ್ನು ಬೆಳಗಿದವರು. ಇಂಥವರು ಬೇರೆ ಯಾರಾದರೂ ಇದ್ದಾರೆಯೆ?” ಎಂದು ಹೆಮ್ಮೆಯಿಂದ ಹೇಳಿಕೊಂಡಿರುವವನು ಕವಿರತ್ನ. ಅವನ ದರ್ಪದ ಮಾತನ್ನು ಕೇಳಿ:

“ರತ್ನ ಪರೀಕ್ಷಕನ್ ಆಂ, ಕೃತಿ-

ರತ್ನ ಪರೀಕ್ಷಕನೆನ್, ಎಂದು ಫಣಿಪತಿಯ ಫಣಾ-

ರತ್ನಮುಮಂ ರನ್ನನ ಕೃತಿ-,

ರತ್ನಮುಮಂ ಪೇಳ್ ಪರೀಕ್ಷಿಪಂಗೆ

ಎಂಟೆರ್ದೆಯೇ?

“ನಾನು ರತ್ನಪರೀಕ್ಷಕ ಎಂದು ಹಾವಿನ ಹೆಡೆಯ ರತ್ನವನ್ನು ಪರೀಕ್ಷೆಮಾಡಲು ಕೈಹಾಕುವವನಿಗೂ ರನ್ನನ ಕೃತಿರತ್ನವನ್ನು ಪರೀಕ್ಷೆ ಮಾಡುತ್ತೇನೆ ಎನ್ನುವವನಿಗೂ ಎಂಟು ಎದೆಗಳಿವೆಯೆ? ಎಂಟುಪಟ್ಟು ಎದೆಗಾರಿಕೆಯಿದ್ದರೆ ಮಾತ್ರ ಆ ಸಾಹಸಗಳಿಗೆ ನುಗ್ಗಲಿ,”

ರನ್ನನು ಶಕ್ತಿವಂತನಾದ ಕವಿ. ಅವನ ಕವಿತಾ ಶಕ್ತಿ ಅವನ ’ಅಜಿತಪುರಾಣಿ ಎಂಬ ಜೈನ ಪುರಾಣದಲ್ಲಿ ಬೆಳಕಿಗೆ ಬರಲು ಹೆಚ್ಚು ಅವಕಾಶವಿಲ್ಲ. ಅದು ಮೇರೆ ಮೀರಿ ಉಕ್ಕಿ ಹರಿದಿರುವುದು ಅವನ ’ಗದಾಯುದ್ಧ’ದಲ್ಲಿ. ಇದು ನಿಜವಾಗಿಯೂ ’ಕೃತಿರತ್ನ’. ಕವಿರತ್ನ ಎಂಬ ಅವನ ಬಿರುದು ಸಾರ್ಥಕವಾಗಿರುವುದು ಈ ಕಾವ್ಯದಿಂದ.


ಕವಿ ಚಕ್ರವರ್ತಿ

            ‘ಅಜಿತ ಪುರಾಣ’ವೂ ಕಳಪೆಯಾದ ಕೃತಿಯಲ್ಲ. ರನ್ನನಿಗಿಂತ ಮೊದಲು ’ಆದಿಕವಿ’ ಎಂದು ಪ್ರಸಿದ್ಧನಾದ ಪಂಪನು ಆದಿತೀರ್ಥಂಕರನನ್ನು ಕುರಿತು ಕ್ರಿ.ಶ.೯೪೧ರಲ್ಲಿ ’ಆದಿಪುರಾಣ’ವನ್ನು ರಚಿಸಿದರು. ಪೊನ್ನನು ಶಾಂತಿನಾಥ ಎಂಬ ತೀರ್ಥಂಕರನನ್ನು ಕುರಿತು ’ಶಾಂತಿ ಪುರಾಣ’ವನ್ನು ಬರೆದನು. ಇವರಿಬ್ಬರ ಮೇಲು ಪಂಕ್ತಿಯನ್ನು ಅನುಸರಿಸಿ ರನ್ನನು ಅಜಿತಪುರಾಣವನ್ನು ಬರೆದನು. ಹೀಗೆ, ಈ ಮೂವರೂ ತಮ್ಮ ಪುರಾಣ ಕಾವ್ಯಗಳಲ್ಲಿ ಜೈನಧರ್ಮದ ತಿರುಳನ್ನು ತೀರ್ಥಂಕರರನ್ನು ಕುರಿತು ಸ್ವಾರಸ್ಸ ಕಥೆಗಳ ಹುರುಳಿನೊಂದಿಗೆ ಬೆರೆಸಿ, ಜೈನಧರ್ಮವನ್ನು ಬೆಳಗಿದರು. ’ಜಿನಸಮಯ ದೀಪಕರು’ ಎಂದು ಪ್ರಸಿದ್ಧರಾದರು.

ಇವರ ತರುವಾಯ ನಾಗವರ್ಮ, ನಾಗಚಂದ್ರ, ಜನ್ನ, ಆಚಣ್ಣ ಮುಂತಾದ ಜೈನಕವಿಗಳು ಜೈನಪುರಾಣಗಳನ್ನು ಬರೆದರು. ಆದರೆ, ಅವು ಯಾವುವೂ ಈ ಮೂವರ ಕೃತಿಗಳ ಸಮಕ್ಕೆ ಬರಲಾರವು. ಈ ಸಂಗತಿಯನ್ನು ಮೊದಲೇ ಕಂಡುಕೊಂಡವನಂತೆ ರನ್ನ ಹೇಳಿದ್ದಾನೆ, ಹೀಗೆ: “ಜಗತ್ತಿನಲ್ಲಿ ಆದಿಪುರಾಣ ಪಂಪನಿಂದ ಪ್ರಸಿದ್ಧವಾಯಿತು; ಪೊನ್ನನಿಂದ ಶಾಂತಿಪುರಾಣ; ಕವಿ ರನ್ನನಿಂದ ಅಜಿತಪುರಾಣ. ಎಣೆಯಿಲ್ಲದ ಈ ಪುರಾಣಗಳ ’ರೇಖೆ’ಗೂ (ಎಂದರೆ, ಹತ್ತಿರಕ್ಕೂ) ಬರಲು ಸಮರ್ಥವಾಗಲಾರವು ಇತರ ಪುರಾಣದ ಕೃತಿಗಳು.” ಇನ್ನು ಅವನ್ನು ಮೀರಿಸುವ ಮಾತೆಲ್ಲಿ ಬಂತು?

ಪಂಪನು ರಾಷ್ಟ್ರಕೂಟ ಚಕ್ರವರ್ತಿ ಮೂರನೆಯ ಕೃಷ್ಣನ ಸಾಮಂತನಾಗಿದ್ದ ಎರಡನೆಯ ಅರಕೇಸರಿಯಿಂದ ಬೇಕಾದಷ್ಟು ಮನ್ನಣೆ ಪಡೆದ. ಕನ್ನಡದಲ್ಲಿ ಪಂಪನೇ ನಿಜವಾದ ’ಕವಿಚಕ್ರವರ್ತಿ’. ಆದರೆ ಸಾಮಂತರಾಜನನ್ನು ಆಶ್ರಯಿಸಿದ ಪಂಪನಿಗೆ ಕವಿಚಕ್ರವರ್ತಿ ಎಂಬ ಬಿರುದು ಬರಲು ಸಾಧ್ಯವೇ ಇರಲಿಲ್ಲ. ಕೃಷ್ಣ ಆಸ್ಥಾನ ಕವಿಯಾದ ಪೊನ್ನನಿಗೆ ಆ ಬಿರುದು ಲಭಿಸಿತು. ’ಕವಿ ಚಕ್ರವರ್ತಿ’ ಎನ್ನಿಸಿಕೊಂಡ ಎರಡನೆಯ ಕವಿಯೆ ರನ್ನ.

ರನ್ನನು ’ಗದಾಯುದ್ಧ’ ಕಾವ್ಯ ಬರೆಯುವ ಕಾಲಕ್ಕೆ ಕನ್ನಡ ನಾಡಿನಲ್ಲಿ ರಾಷ್ಟ್ರಕೂಟರೂ, ರನ್ನನಿಗೆ ಮೊದಲು ಆಶ್ರಯಕೊಟ್ಟಿದ್ದ ತಲಕಾಡಿನ ಗಂಗವಂಶದ ರಾಜರೂ ತಮ್ಮ ಪದವಿಗಳನ್ನು ಕಳೆದುಕೊಂಡಿದ್ದರು. ಚಾಲುಕ್ಯ ವಂಶದ ಎರಡನೆಯ ತೈಲಪನು ರಾಷ್ಟ್ರಕೂಟರ ಸ್ಥಾನಕ್ಕೆ ಬಂದು ಚಕ್ರವರ್ತಿ ಎನ್ನಿಸಿಕೊಂಡಿದ್ದನು. ರನ್ನನು ತೈಲಪನ ಆಸ್ಥಾನವನ್ನು ಸೇರಿ, ’ಸಾಹಸಭೀಮ ವಿಜಯ’ ಅಥವಾ ’ಗದಾಯುದ್ಧ’ ಎಂಬ ಕಾವ್ಯವನ್ನು ಬರೆದನು. ಇದು ತೈಲಪನ ಮೆಚ್ಚುಗೆಗೆ ಪಾತ್ರವಾಯಿತು. ಚಕ್ರವರ್ತಿ ತೈಲಪನು ರನ್ನನಿಗೆ ’ಕವಿಚಕ್ರವರ್ತಿ’ ಎಂಬ ಬಿರುದನ್ನು ಕೊಟ್ಟನು. “ರನ್ನನು ತನ್ನ ಅತಿಶಯವಾದ ಮಹಿಮೆಯನ್ನೂ ಕವಿಚಕ್ರವರ್ತಿ ಎಂಬ ಹೆಸರನ್ನು ಕಡುಬಡವರಿಂದ ಪಡೆದನೇನು? ಇಲ್ಲ. ಚಕ್ರವರ್ತಿಯಾದ ತೈಲಪನಿಂದ ಪಡೆದನು” ಎಂದು ರನ್ನ ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ. ರನ್ನನು ಮಾತು ಸುಳ್ಳಲ್ಲ ಎನ್ನುವುದಕ್ಕೆ ಜನ್ನನ ಮಾತು ಸಾಕ್ಷಿ. ಜನ್ನನು ತನ್ನ ’ಅನಂತನಾಥ ಪುರಾಣ ’ ದಲ್ಲಿ ಪೊನ್ನನು ಕೃಷ್ಣನಿಂದಲೂ, ರನ್ನನು ತೈಲಪನಿಂದಲೂ ’ ಕವಿಚಕ್ರವರ್ತಿ’ ಎಂಬ ಬಿರುದನ್ನು ಪಡೆದ ಸಂಗತಿಯನ್ನು ಸ್ವಷ್ಟವಾಗಿ ತಿಳಿಸಿದ್ದಾನೆ.

ಹೀಗೆ, ಕನ್ನಡದಲ್ಲಿ ಮೂವರು ಕವಿರತ್ನರು. ಮೂವರು ಕವಿಚಕ್ರವರ್ತಿಗಳು. ಕವಿರತ್ನ ಮತ್ತು ಕವಿಚಕ್ರವರ್ತಿ ಎಂದು ಪ್ರಸಿದ್ಧರಾಗಿರುವವರು ಇಬ್ಬರೇ, ಪೊನ್ನ ಮತ್ತು ರನ್ನ. ಚಕ್ರವರ್ತಿ ಎನ್ನುವುದು ಹೇಳಿ ಕೇಳಿ ಬಿರುದಿನ ಮಾತು ಇಬ್ಬರಲ್ಲಿ ನಿಜವಾದ ಕವಿರತ್ನ ಯಾರು ಎಂದು ಕೇಳಿದರೆ, ರನ್ನ ಎನ್ನಬೇಕಾಗುತ್ತದೆ.’ ರನ್ನ’ ಮನೆಯವರು ಇಟ್ಟ ಹೆಸರು; ‘ರತ್ನ’ ಎಂಬ ಸಂಸ್ಕ್ರತ ಹೆಸರಾದರೂ, ಅದು ಅವನ ಪ್ರತಿಭೆಯ ಹಾಗೂ ಸಾಧನೆಯ ಫಲ.


ಮನೆತನ

            ಪೂರ್ವದ ಕನ್ನಡ ಕವಿಗಳು ತಮ್ಮ ವಿಷಯವಾಗಿ ಹೇಳಿಕೊಳ್ಳುವ ಪದ್ಧತಿ ಇಲ್ಲ. ಆದರೆ ಪಂಪ ರನ್ನರಂಥ ಕೆಲವರು ತಮ್ಮ ಬಗೆಗೆ ಕೆಲವು ಮುಖ್ಯ ಸಂಗತಿಗಳನ್ನು ತಿಳಿಸಿ ಉಪಕಾರ ಮಾಡಿದ್ದಾರೆ.

ಬೆಳುಗಲಿ ಅಯ್ನೂರು, ಎಂದರೆ ಅಯ್ನೂರು ಗ್ರಾಮಗಳುಳ್ಳ ಪ್ರಸಿದ್ಧವಾದ  ಪ್ರಾಂತ ಅದರಲ್ಲಿ ಜಂಬುಖಂಡಿ (ಈಗಿನ ಜಮಖಂಡಿ) ಎಪ್ಪತ್ತು ಗ್ರಾಮಗಳನ್ನು ಒಳಗೊಂಡ ಪ್ರದೇಶ. ಇದಕ್ಕೆ ತಿಲಕದಂತಿದ್ದ, ಪ್ರಸಿದ್ದವಾದ ಮುದುವೊಳಲಿನಲ್ಲಿ (ಈಗಿನ ಮುಧೋಳ) ಹುಟ್ಟಿ ಕವಿರತ್ನನು ಸುಪುತ್ರನೆನಿಸಿಕೊಂಡನು. ಈ ಬೆಳುಗಲಿ ದೇಶವು ಪ್ರಸಿದ್ಧ ವಾದ ಗಟ್ಟಿಗೆ (ಘಟಪ್ರಭಾ) ನದಿಯೂ ಪೆರ್ದೊರೆ (ಎಂದರೆ, ಕೃಷ್ಣಾ) ನದಿಯೂ ಹರಿಯುತ್ತಿದ್ದ ಎಡೆಯಲ್ಲಿ ತದ್ದವಾಡಿಗೆ ತೆಂಕಲಿಗೂ (ದಕ್ಷಿಣಕ್ಕೂ) ತೊರಗಲಿಗೆ ಬಡಗಲಿಗೂ (ಉತ್ತರಕ್ಕೂ) ಎದ್ದಿತು. ಅದು ನೆಮ್ಮದಿಯ ನಾಡು. ಬೆಳುಗರೆ ನಾಡಿನಲ್ಲಿ ಹುಟ್ಟಿದ ಬಳೆಗಾರರ ಕುಲಕ್ಕೆ ಸೇರಿದವನು ಕವಿರತ್ನ; ಕುಲಧರ್ಮವಾದ  ಜೈನಧರ್ಮ ವನ್ನು ಬೆಳಗಿದವನು. ಅದನ್ನು ಹಾಗೆ ಬೆಳಗಲು ಹುರುಪುಗೊಳಿಸಿದವನು ತೈಲಪಚಕ್ರೇಶ್ವರನಿಗೆ ಮಂಡಲಾಧಿಪತಿಯಾಗಿದ್ದ ಚಾವುಂಡರಾಯ. ಮೊತ್ತ ಮೊದಲು ರತ್ನನು ಸಾಮಂತರಾಜರ ಪ್ರೋತ್ಸಾಹದಿಂದ ತುಸತುಸ ಮುಂದಕ್ಕೆ ಬಂದನು.ಮಂಡಲೇಶ್ವರನಾದ ಚಾವುಂಡರಾಯನಿಂದ ಹೆಚ್ಚಿನ ಏಳಿಗೆ ಹೊಂದಿದನು. ಚಕ್ರವರ್ತಿ ತೈಲಪನಿಂದ ಇನ್ನೂ ಅತಿಶಯವಾದ ಮೇಲ್ಮೆ ಪಡೆದನು.


ವಿದ್ಯಾಭ್ಯಾಸ

       ಸೌಮ್ಯ ಮುಖದ ಕವಿರತ್ನ ಸೌಮ್ಯನಾಮ ಸಂವತ್ಸರದಲ್ಲಿ (ಎಂದರೆ ಕ್ರಿಸ್ತ ಶಕ ೯೪೯ರಲ್ಲಿ) ಹುಟ್ಟಿದನು. ಅವನ ತಂದೆ ಜಿನವಲ್ಲಭ, ತಾಯಿ ಅಬ್ಬ ಲಬ್ಬೆ. ರನ್ನ ಬಾಲ್ಯದಲ್ಲಿ ನೆರೆಹೊರೆಯ ಮುದ್ದಿನ ಹುಡುಗ. ಚಿಕ್ಕಂದಿನಿಂದ ಪದ್ಯ, ಹಾಡು, ಶ್ಲೋಕಗಳನ್ನು ಕಲಿತು, ಕಟ್ಟಿ, ಹೇಳುವುದರಲ್ಲಿ ಅಪಾರ ಅಕ್ಕರೆ. ಗಟ್ಟಿಮುಟ್ಟಾದ  ಮೈಕಟ್ಟು. ಬಳೆಬಳೆದಂತೆ ಕುಲಕಸುಬಾದ ಬಳೆಗಾರ ವೃತ್ತಿ ಬೇಡವೆನಿಸಿತು. ಕುಲಧರ್ಮವಾದ ಜೆನಧರ್ಮವನ್ನು ಅರಿಯುವ ಆಸೆ ಒಂದು ಕಡೆ ; ಕಾವ್ಯ ಕಲೆಯನ್ನು ಕೈವಶಮಾಡಿಕೊಳ್ಳಬೇಕೆಂಬ ಬಯಕೆ ಮತ್ತೊಂದೆಡೆ. ಮುದುವೊಳಲಿನಲ್ಲಿ ಇದಕ್ಕೆ ಅವಕಾಶವಿರಲಿಲ್ಲ. 


ವಿದ್ಯಾಭ್ಯಾಸದ ಹಂಬಲದಿಂದ ಹಲವು ಗುರುಗಳನ್ನು ಹುಡುಕುತ್ತಾ ವಿದ್ಯಾ ಭಿಕ್ಷೆಯನ್ನು ಬೇಡಿದನು. ಆದರೆ ಪ್ರತಿಯೊಬ್ಬರೂ ಅವನ ಮನೆತನದ ಬಗ್ಗೆ, ಅವನ ವೃತ್ತಿಯ ಬಗ್ಗೆ ಕೇಳಿ ಆತನಿಗೆ ವಿದ್ಯಾದಾನ ಮಾಡಲು ನಿರಾಕರಿಸಿದರು. ಅಂದಿನ ದಿನಗಳಲ್ಲಿ ರಾಜ ಮನೆತನಕ್ಕೆ, ಬ್ರಾಹ್ಮಣರಿಗೆ ಮಾತ್ರ ಶಿಕ್ಷಣ ಸೀಮಿತವಾಗಿದ್ದುದೇ ಅದಕ್ಕೆ ಪ್ರಮುಖ ಕಾರಣ.

ಒಮ್ಮೆ ಒಬ್ಬ ಗುರುಗಳು ಆತನ ಹೃದಯದಲ್ಲಿ ಕಿಚ್ಚು ಹೊತ್ತಿಸುವಂತೆ ಹೀಗೆ ಹಂಗಿಸಿದರು:

"ಕೊಂಡು ತಂದು, ಹೊತ್ತು ಮಾರಿ, ಲಾಭಗಳಿಸಲು ವಿದ್ಯೆ ಏನು ಬಳೆಯ ಮಲಾರವೇ" ಎಂದು ಜರಿದರು. ಆಗ ರನ್ನನು ಎದೆಗುಂದದೆ ವಿದ್ಯೆಕಲಿಯುವ ಹಟ ತೊಟ್ಟು, ಆಗಿನ ದಿನಗಳಲ್ಲಿ ಜೈನ ಧರ್ಮಕ್ಕೂ ವಿದ್ಯೆಗೂ ನೆಲೆವೀಡು ಎನಿಸಿದ್ದ, ದೂರದ ಗಂಗರಾಜ್ಯಕ್ಕೆ ಪ್ರಯಾಣ ಮಾಡಿದನು. ಆಗ ರಕ್ಕ ರಾಚಮಲ್ಲನು ಗಂಗಮಂಡಲದ ಅಧಿಪತಿಯಾಗಿದ್ದನು (ಕ್ರಿ.ಶ.೯೭೩-೯೮೬). ಅಲ್ಲಿ ಗಂಗ ದೊರೆಯ ಮಂತ್ರಿ ಯಾಗಿದ್ದವನು ಚಾವುಂಡರಾಯ. ಇವನು ಸ್ವತ: ವಿದ್ಯಾವಂತ, ವಿದ್ಯಾಪಕ್ಷಪಾತಿ ; ಕವಿ ರನ್ನ ಈತನ ಬಳಿಗೆ ಹೋಗಿ ಕಂಡನು, ಪರಿಚಯ ಮಾಡಿಕೊಂಡನು, ವಿದ್ಯೆಯಲ್ಲಿ ಆಸಕ್ತಿ ಹೊಂದಿದ್ದ ಚಾವುಂಡರಾಯನಿಂದ ಸಹಾಯ ಪಡೆಯುವುದು ರನ್ನನಿಗೆ ಕಷ್ಟವಾಗಲಿಲ್ಲ. ಹೀಗೆ ದೊರೆ ಸಹಾಯದಿಂದ ರನ್ನನು ಅಜಿತ ಸೇನಾಚಾರ್ಯರಂತಹ ಸದ್ಗುರುಗಳ ಬಳಿ ನೆಲಿಸಿ, ಭಾಷೆ  ಸಾಹಿತ್ಯಗಳಲ್ಲಿ ಪಾಂಡಿತ್ಯವನ್ನು ಪಡೆದನು ; ಕನ್ನಡ, ಸಂಸ್ಕ್ರತ, ಪ್ರಾಕೃತ ಭಾಷೆಗಳಲ್ಲಿ ನಿಪುಣನಾದನು. ಸಂಸ್ಕೃತದಲ್ಲಿ ರಾಮಾಯಣ ಮಹಾಭಾರತಗಳನ್ನೂ, ಭಾಸ, ಕಾಳಿದಾಸ, ಭಟ್ಟನಾರಾಯಣ, ಬಾಣ ಮುಂತಾದ ಕವಿಗಳ ಗದ್ಯ ಪದ್ಯ ನಾಟಕ ಗ್ರಂಥಗಳನ್ನೂ ಚೆನ್ನಾಗಿ ಓದಿಕೊಂಡನು.

ವಾಲ್ಮೀಕಿ, ವ್ಯಾಸ, ಕಾಳಿದಾಸ, ಬಾಣ – ಈ ಕವಿಗಳು ರನ್ನನ ಮೆಚ್ಚಿನ ಕವಿಗಳು. ಅಲಂಕಾರಶಾಸ್ತ್ರ, ನಾಟ್ಯಶಾಸ್ತ್ರ ಮುಂತಾದ ಶಾಸ್ತ್ರಗಳನ್ನು ಅಭ್ಯಾಸಮಾಡಿದನು. ’ಗದಾಯದ್ದ’ದಲ್ಲಿ ಭೀಮ ದುರ್ಯೋಧನರ ಗದಾಯುದ್ಧ ಭಾಗವನ್ನು ರನ್ನ ವರ್ಣಿಸಿರುವ ರೀತಿಯನ್ನು ನೋಡಿದರೆ, ಗದಾಯದ್ಧವನ್ನು ಅಭ್ಯಾಸ ಮಾಡಿ ಅದನ್ನು ತಿಳಿದುಕೊಂಡಿದ್ದನೇನೋ ಎನ್ನಿಸುತ್ತದೆ. ವ್ಯಾಕರಣ ಶಾಸ್ತ್ರದಲ್ಲಿ ಅವನಿಗೆ ವಿಶೇಷ ಪಾಂಡಿತ್ಯ. ಸಂಸ್ಕೃದಲ್ಲಿ ಜೈನೇಂದ್ರ ಮತ್ತು ಪಾಣಿನಿ ಎಂಬವರ ವ್ಯಾಕರಣಗಳಲ್ಲಿ ತಾನು ಪಂಡಿತ ಎಂದು ರನ್ನನೇ ಹೇಳೀಕೊಂಡಿದ್ದಾನೆ. ಪಂಪಪೊನ್ನರ ಕಾವ್ಯಗಳನ್ನು ಆಳವಾಗಿ ಅಭ್ಯಾಸ ಮಾಡಿ, ಕಾವ್ಯ ವಿದ್ಯೆಯ ಪರಿಚಯ ಮಾಡಿಕೊಂಡನು. ಪಟ್ಟು ಹಿಡಿದು ಮಾಡಿದ ಈವಿದ್ವತ್ತಿನ ಸಾಧನೆ ಕಾವ್ಯಕಲೆಯಲ್ಲಿ ಅವನಿಗೆ ಸಿದ್ಧಿಯನ್ನು ದೊರಕಿಸಿಕೊಟ್ಟಿತು.ಯಾವ ಕಾಲದಲ್ಲಿಯೇ ಆಗಲಿ, ಪಾಂಡಿತ್ಯದ ಬೆಂಬಲವಿಲ್ಲದೆ ಕೇವಲ ಪ್ರತಿಭೆಯ ಬಲದಿಂದ ದೀರ್ಘವಾದ ಪ್ರೌಢ ಕಾವ್ಯಗಳನ್ನು ಬರೆಯಲು ಸಾದ್ಯವಿಲ್ಲ. ಸಹಜವಾದ ಕವಿತಾ ಶಕ್ತಿಯ ಜೊತೆಗೆ ಪಾಂಡಿತ್ಯದ ಬೀಗದ ಕೈಯನ್ನ ಪಡೆದುಕೊಂಡಿದ್ದರಿಂದ, ವಾಗ್ದೇವಿಯ ಭಂಡಾರದ ಮದ್ರೆಯನ್ನು ಒಡೆಯಲು ಅವನು ಸಮರ್ಥನಾದನು. ಎರಡು ಕೃತಿರತ್ನಗಳು ಹೊರಬಂದವು -’ ಅಜಿತ ಪುರಾಣ ’ ಮತ್ತು ’ಸಾಹಸಭೀಮ ವಿಜಯ.’

ಜೈನ ಧರ್ಮವನ್ನು ಚೆನ್ನಾಗಿ ತಿಳಿದುಕೊಳ್ಳಬೇಕೆಂಬ ಆಸೆ ರನ್ನನಿಗೆ ಮೊದಲನಿಂದಲೂ ಇದ್ದಿತು. ಚಾವುಂಡರಾಯನ ಹಾಗೂ ಗಂಗರಸನ ಗುರುಗಳಾಗಿದ್ದ ಅಜಿತಸೇನಾಚಾರ್ಯರನ್ನು ಆಶ್ರಯಿಸಿ, ಜೈನ ಮತವನ್ನು ಆಳವಾಗಿ ಅಭ್ಯಾಸ ಮಾಡಿದನು. ಇದರಿಂದ ಜೈನ ಪುರಾಣವನ್ನು ಬರೆಯುವುದು ಸಾಧ್ಯವಾಯಿತು.

ಚಾವುಂಡರಾಯನ ಸಹಾಯದಿಂದ ರನ್ನನು ಅನೇಕ ಸಾಮಂತರ ರಾಜ್ಯಸಭೆಗಳಿಗೆ ಹೋಗಿದ್ದು, ಪಂಡಿತ ರಾಜ್ಯಸಭೆಗಳಿಗೆ ಹೋಗಿದ್ದು,ಪಂಡಿತ ಮಂಡಲಿಗಳಲ್ಲಿಯೂ ಕವಿಗೋಷ್ಠಿಗಳಲ್ಲಿಯೂ ತನ್ನ ಪಾಂಡಿತ್ಯವನ್ನೂ ಕವಿತಾ ಶಕ್ತಿಯನ್ನೂ ಮೆರೆದು ಪ್ರಸಿದ್ದನಾದನು. ಅನೇಕ ತೀರ್ಥಕ್ಷೇತ್ರಗಳನ್ನೂ ನೋಡಿ ಬಂದನು. ವಿದ್ಯಾಭ್ಯಾಸ, ದೇಶಸಂಚಾರ- ಇವೆರಡೂ ಮುಗಿದ ಮೇಲೆ ಹುಟ್ಟಿದೂರಿಗೆ ಹಿಂದಿರುಗುವ ಮನಸ್ಸಾಯಿತು. ಗುರುಗಳನ್ನೂ ಪೋಷಕನಾಗಿದ್ದ ಚಾವುಂಡರಯನನ್ನೂ ಬೀಳ್ಕೊಂಡು ತನ್ನ ಊರಿಗೆ ಹಿಂದಿರುಗಿದನು. 


ರನ್ನ ಚಾವುಂಡರಾಯನನ್ನು ಹೋಗಿ ಕಂಡನು


ರನ್ನನ ರುಜು

          ಶ್ರವಣಬೆಳಗೊಳದ ಚಿಕ್ಕಬೆಟ್ಟದ ಒಂದು ಬಂಡೆಯ ಮೇಲೆ ’ ಶ್ರೀ ಕವಿರತ್ನ’ ಎಂದು ಕೊರೆದಿದೆ. ಈ ಹೆಸರಿನ ಅಕ್ಷರಗಳು ೯-೧೦ನೆಯ ಶತಮಾನದ ಆದಿಯಲ್ಲಿ ಇರುವುದರಿಂದ ಈಚೆಗೆ ಯಾರೋ ಬರೆದದ್ದಲ್ಲ. ರನ್ನನ ಕೈಬರಹ ಇದ್ದರೂ ಇರಬಹದು ; ಆದರೆ ಹಾಗೆಂದು ಖಂಡಿತವಾಗಿ ಹೇಳಲು ಸಾಧ್ಯವಿಲ್ಲ. ಅಂತೂ, ರನ್ನನು ಶ್ರವಣಬೆಳಗೊಳಕ್ಕೆ ಹೋಗಿದ್ದನೆಂದು ಇದರಿಂದ ಗೊತ್ತಾಗುತ್ತದೆ. ರನ್ನನು ಅಜಿತಪುರಣವನ್ನು ಕ್ರಿ.ಶ. ೯೯೩ ರಲ್ಲಿ ಬರೆದು ಮುಗಿಸಿದನು.ಅದನ್ನು ಬರೆಯಿಸಿದವಳು ಅತ್ತಿ ಮಬ್ಬೆ ಎಂಬ ಜಿನಭಕ್ತೆ. ಅತ್ತಿಮಬ್ಬೆ, ಶ್ರವಣಬೆಳಗೊಳದಲ್ಲಿ ಚಾವುಂಡರಯನು ಮಹೋತ್ಸವಕ್ಕೆ ಹೋಗಿದ್ದ ಸಂಗತಿಯನ್ನು ಅಜಿತಪುರಾಣದಲ್ಲಿ ರನ್ನ ಕಣ್ಣಿಗೆ ಕಟ್ಟಿದಂತೆ ವರ್ಣಿ ಸಿದ್ದಾನೆ. ಈ ಉತ್ಸವ ನೆಡೆದದ್ದು ಕ್ರಿ.ಶ.೯೮೩ರಲ್ಲಿ. ಎಂದ ಮೇಲೆ, ಇದಕ್ಕಿಂತ ಮುಂಚೆಯೇ ರನ್ನ ಗಂಗರಾಜ್ಯದಿಂದ ತನ್ನ ನಾಡಿಗೆ ಹಿಂದಿರುಗಿದ್ದನೆಂದು ಹೇಳಬಹುದು. ವಿಗ್ರಹವನ್ನು ಮಾಡಿಸಿ, ಪ್ರತಿಷ್ಠೆ ಮಾಡಿಸಿದವನು ತನ್ನ ಪೋಷಕ ಚಾವುಂಡರಾಯ, ಮಹೋತ್ಸವವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದವರು ಪೂಜ್ಯ ಗುರುಗಳಾದ ಅಜಿತಸೇನಾಚಾರ್ಯರು; ರನ್ನನು ಈ ಉತ್ಸವಕ್ಕೆ ಹೋಗಿದ್ದುದರಲ್ಲಿ ಆಶ್ವರ್ಯವೇನು? ಈ ವೇಳೆಗೆ ರನ್ನನು ಅತ್ತಮಬ್ಬೆಯ ಆಶ್ರಯವನ್ನು ಪಡೆದಿದ್ದನೆಂದು ಕಾಣುತ್ತದೆ. ರನ್ನನು ಆಕೆಯೊಂದಿಗೆಯೇ ಶ್ರವಣಬೆಳಗೊಳಕ್ಕೆ ಪ್ರಯಾಣ ಮಾಡಿರಬೇಕು. ಅತ್ತಿಮಬ್ಬೆ “ಅನ್ನಮಂ ಬಿಸುಟು ಪರ್ವತಂ ಪರಿದೇರಿ” ಜಿನನ ಬಳಿ ನಿಂತಾಗ ಈ ಜಿನಭಕ್ತೆಗಾಗಿ ಹೂಮಳೆಗರೆಯಿತೋ ಎನ್ನುವಂತೆ ಆಕಾಲದಲ್ಲಿ ಮಳೆಗರೆಯಿತಂತೆ!



ರನ್ನನ ಮಡದಿ ಮಕ್ಕಳು

         ರನ್ನನು ತನ್ನ ಹಿಂದಿರುಗಿದ ಮೇಲೆ, ತೈಲಪನ ಆಸ್ಥಾನದಲ್ಲಿ ವಿದ್ವಾಂಸನೆನಿಸಿಕೊಂಡು ಅವನ ಆಶ್ರಿತನಾದನು. ಈ ವೇಳೆಗೆ ಅವನು ಮದುವೆ ಮಾಡಿಕೊಂಡಿದ್ದನೆಂದು ಕಾಣುತ್ತದೆ. ಅವನಿಗೆ ಜಕ್ಕಿ ಮತ್ತು ಶಾಂತಿ ಎಂಬ ಇಬ್ಬರು ಹೆಂಡತಿಯರು. ಇವರ ಸದ್ಗುಣಗಳನ್ನು ರನ್ನ ಮೆಚ್ಚಿಕೊಂಡು ಕೊಂಡಾಡಿದ್ದಾನೆ. ಬಹುಕಾಲದವರೆಗೆ ಅವನಿಗೆ ಮಕ್ಕಳಾಗಿರಲಿಲ್ಲ. ಕಾಲಾನಂತರದಲ್ಲಿ ೪೦ ವಯಸ್ಸು ದಾಟಿದ ಮೇಲೆ, ಇಬ್ಬರು ಮಕ್ಕಳಾದರು – ಒಬ್ಬ ಮಗ, ಒಬ್ಬಳು ಮಗಳು. ಗಂಗರಾಜ್ಯದಲ್ಲಿದ್ದಾಗ ತನಗೆ ಬಹು ವಿಧಗಳಲ್ಲಿ ಉಪಕಾರ ಮಾಡಿದ ಚಾವುಂಡರಾಯನ ’ರಾಯ’ ಎಂಬ ಹೆಸರನ್ನು ಮಗನಿಗೆ ಇಟ್ಟನು; ತನ್ನ ದೇಶಕ್ಕೆ ಹಿಂದಿರುಗಿದ ಮೇಲೆ, ಜೈನ ಭಕ್ತಿಯೂ ಕಾವ್ಯಪ್ರೇಮಿಯೂ ಆದ, ತನಗೆ ಆಶ್ರಯಕೊಟ್ಟು ತನ್ನಿಂದ ಕಾವ್ಯ ಬರೆಯಿಸಿದ ಅತ್ತಿಮಬ್ಬೆಯ ಹೆಸರನ್ನು ಮಗಳಿಗೆ ಇಟ್ಟನು. ಅಜ್ಜ ಅಜ್ಜಿಯರ, ಹತ್ತಿರದ ಬಂಧುಗಳ ಹೆಸರನ್ನು ಮಕ್ಕಳಿಗೆ ಇಡುವುದು ಅಪೂರ್ವ. ಅವರ ವಿಷಯದಲ್ಲಿ ರನ್ನ ಎಷ್ಟು ಕೃತಜ್ಞನಾಗಿದ್ದನೆಂಬುದನ್ನು ಈ ಸಂಗತಿ ಎತ್ತಿ ತೋರಿಸುತ್ತದೆ. ಉಪಕಾರ ಸ್ಮರಣೆ ಒಂದು ದೊಡ್ಡ ಗುಣ.


ರನ್ನನ ಕೃತಿಗಳು

         ರನ್ನನ ಅಜಿತಪುರಾಣದ ಒಂದು ಪದ್ಯದಿಂದ ಅವನು ’ಪರಶುರಾಮ ಚರಿತ,’ ’ಚಕ್ರೇಶ್ವರ ಚರಿತ,’ ಅಜಿತ ತೀರ್ಥೇಶ್ವರ ಚರಿತ’ (ಅಜಿತ ಪುರಾಣ) ಎಂಬ ಮೂರು ಕಾವ್ಯದಲ್ಲಿ ’ಗದಾಯುದ್ಧ’ದ ಹೆಸರನ್ನು ಹೇಳಿಲ್ಲ. ಈ ಕಾರಣದಿಂದಲೂ, ಬೇರೆಯ ಶಾಸನಾಧಾರ ಮುಂತಾದ ಇತರ ಆಧಾರಗಳಿಂದಲೂ ಅಜಿತ ಪುರಾಣವನ್ನು ರಚಿಸಿದ ಹತ್ತಾರು ವರ್ಷಗಳಾದ ಮೇಲೆ ’ಗದಾಯುದ್ಧ’ವನ್ನು ರಚಿಸಿರಬೇಕೆಂದು ಕೆಲವರ ಹೇಳಿಕೆ. ಅಜಿತ ಪುರಾಣದ ಕಾಲಕ್ಕೆ (ಎಂದರೆ ೯೯೩ಕ್ಕೆ) ಮೊದಲೇ, ಸುಮಾರು ೯೮೨ರಲ್ಲಿ ಗದಾಯುದ್ಧ ಬರೆದಿರುಬಹುದು ಎಂದು ಇನ್ನು ಕೆಲವರ ಅಭಿಪ್ರಾಯ. ಅವು ಹೇಗೇ ಇದ್ದರೂ, ಈ ನಾಲ್ಕು ಕಾವ್ಯಗಳು ರನ್ನ ಬರೆದವು. ಇದರಲ್ಲಿ ಸಂದೇಹವೇನಿಲ್ಲ. ಪರಶುರಾಮಚರಿತ. ಚಕ್ರೇಶ್ವರ ಚರಿತಗಳು ಇನ್ನೂ ಸಿಕ್ಕಿಲ್ಲ. ಇವುಗಳ ಕಥಾವಸ್ತು ಏನಿರಬಹುದು ಎಂದು ವಿದ್ವಾಂಸರು ಅನೇಕ ರೀತಿಯಲ್ಲಿ ಊಹೆ ಮಾಡಿದ್ದಾರೆ. ರನ್ನನು ತಾನು ಉಭಯಕವಿ ಎಂದರೆ ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ಕಾವ್ಯ ಬರೆದಿರುವವನು – ಎಂದು ಹೇಳಿಕೊಂಡಿದ್ದಾನೆ. ಆದರೆ ಅವನು ಬರೆದಿರಬಹುದಾದ ಸಂಸ್ಕೃತ ಗ್ರಂಥಗಳು ಯಾವುವೂ ಸಿಕ್ಕಿಲ್ಲ. ೧೨ ಕಂದ ಪದ್ಯಗಳುಳ್ಳ ಒಂದು ಚಿಕ್ಕ ಗ್ರಂಥಭಾಗವೊಂದು ಸಿಕ್ಕಿದೆ. ಪ್ರತಿ ಪದ್ಯದಲ್ಲಿಯೂ ಕಠಿಣವಾದ ಕನ್ನಡ ಶಬ್ದಗಳಿಗೆ ಅರ್ಥವನ್ನು ಹೇಳಿದೆ. ಉದಾಹರಣೆಗೆ, ಸಣ್ಣದು ಎಂದರೆ ಮಾಡು, ಬಳಿ ಎಂದರೆ ವಂಶ, ಹೀಗೆ ಆರ್ಥ ಹೇಳಿಕೊಂಡು ಹೋಗಿದೆ. ಪ್ರತಿಪದ್ಯವೂ ’ಕವಿರತ್ನ’ ಎಂದು ಮುಗಿಯುವುದರಿಂದ ಈ ನಿಘಂಟು ರನ್ನ ಬರೆದದ್ದು ಎಂದು ಊಹಿಸಿದೆ.


ಅತ್ತಿಮಬ್ಬೆ

       ಅಜಿತಪುರಾಣವನ್ನು  ರನ್ನನಿಂದ ಬರೆಯಿಸಿದವಳು ಅತ್ತಿಮಬ್ಬೆ ಎಂದು ಹಿಂದೆಯೇ ಹೇಳಿದೆ. ಅತ್ತಿಮಬ್ಬೆಯಲ್ಲಿ ರನ್ನನಿಗೆ ಅಪರ ಗೌರವ. ಅವಳ ಮನೆತನ ಜೈನಧರ್ಮ ಶ್ರದ್ಧೆಗೂ ಕಾವ್ಯಪ್ರೇಮಕ್ಕೂ ಸ್ವಾಮಿ ಭಕ್ತಿಗೂ ಹೆಸರಾದದ್ದು. ತಂದೆ ಮಲ್ಲಪ, ಚಿಕ್ಕಪ್ಪ ಪೊನ್ನಮಯ್ಯ-ಇಬ್ಬರೂ ಆಹವಮಲ್ಲ ಚಾಲುಕ್ಯ ಚಕ್ರವರ್ತಿ ತೈಲಪನ ಸೇವೆಗಾಗಿ ದೇಹವನ್ನು ಮುಡುಪಾಗಿಟ್ಟಿದ್ದವರು. ಪೊನ್ನನಿಂದ ಶಾಂತಿಪುರಾಣವನ್ನು ಬರೆಯಿಸಿದವರು ಇವರು. ಹಿರಿಯನಾದ ಮಲ್ಲಪ ವಿದ್ಯಾನಿಧಿ; ಕಿರಿಯ ಪೊನ್ನಮಯ್ಯ ಚಾವುಂಡರಾಯನ ಭಕ್ತ, ಹೀಗಿದ್ದುದರಿಂದ, ರನ್ನನಿಗೆ ಈ ಮನೆತನದವರ ಪರಿಚಯ ಲಾಭವಾದದ್ದರಲ್ಲಿ ಆಶ್ಚರ್ಯವಿಲ್ಲ.

ಈ ಮನೆತನದ ಮೂಲಕವಾಗಿಯೇ ರನ್ನನಿಗೆ ತೈಲಪ ಚಕ್ರವರ್ತಿ ಆಸ್ಥಾನಕ್ಕೆ ಪ್ರವೇಶ ದೊರಕಿರಬೇಕು. ಈ ಸನ್ನಿವೇಶದಲ್ಲಿ, ಅತ್ತಿಮಬ್ಬೆಯ ಸದ್ಗುಣಗಳೂ ದಾನ ಕಾರ್ಯಗಳೂ ರನ್ನನ ಗಮನಕ್ಕೆ ಬಂದುವು. ರನ್ನನ ಪ್ರತಿಭೆಯನ್ನು ಆಕೆಯೂ ಗುರುತಿಸಿದಳು. ತನ್ನ ಹಿರಿಯರು ಪೊನ್ನನಿಂದ ಪುರಾಣ ಕಾವ್ಯವನ್ನು ಬರೆಯಿಸಿದಂತೆ, ಅವಳೂ ರನ್ನನಿಂದ ಅಜಿತ ಪುರಾಣವನ್ನು ಬರೆಯಿಸಿದಳು. ಅತ್ತಿಮಬ್ಬೆಯ ವ್ಯಕ್ತಿತ್ವವು ರನ್ನನ ಮನಸ್ಸನ್ನು ಸೂರೆಗೊಂಡಿತು. ಅವನು ಅವಳ ಭಕ್ತನೇ ಆಗಿಬಿಟ್ಟ. ಅವಳು ಅವನಿಗೆ ಒಬ್ಬ ತಪಸ್ವಿನಿಯಂತೆ ಕಂಡಳು. ಭಕ್ತಿಯಿಂದ, ಕೃತಜ್ಞತೆಯಿಂದ, ತನ್ನ ಕಾವ್ಯದಲ್ಲಿ ಅವಳಿಗೆ ಸ್ತೋತ್ರಮಾಲಿಕೆಯನ್ನು ಅರ್ಪಿಸಿದನು, ಜಿನ ಧರ್ಮಪತಾಕೆಯನ್ನು ಎತ್ತಿ ಹಿಡಿದ ಮಹಾಸತಿ ಅತ್ತಿಮಬ್ಬೆಯನ್ನು ಬಣ್ಣಿಸುವುದು ಪುಣ್ಯವೆಂದು ಭಾವಿಸಿದನು. ಕಸವರಗಲಿ (ಎಂದರೆ ಚಿನ್ನವನ್ನು ದಾನ ಮಾಡುವುದರಲ್ಲಿ ಶೂರಳು), ಶೀಲಾಲಂಕೃತೆ, ಗುಣಮಾಲಾಲಂಕೃತೆ ಎಂದು ಮುಂತಾಗಿ ರನ್ನ ಮನಃಪೂರ್ವಕವಾಗಿ ಆಕೆಯನ್ನುಕೊಂಡಾಡಿದ್ದಾನೆ. ಅವಳ ಶುಭ್ರವಾದ ಶೀಲ  ಬಿಳಿಯ ಅರಳೆಯಂತೆ ಅಚ್ಚ ಬಿಳುಪು; ಗಂಗಾಜಲದಂತೆ ನಿರ್ಮಲ; ಗುರು ಅಜಿತ ಸೇನರ ಗುಣಗಳಂತೆ ಪವಿತ್ರ, ಅತ್ತಿಮಬ್ಬೆಯ ದಾನ ಗುಣವನ್ನು ಎಷ್ಟು ವರ್ಣಿಸಿದರೂ ರನ್ನನಿಗೆ ತೃಪ್ತಿಯಿಲ್ಲ.

ಅತ್ತಿಮಬ್ಬೆಯನ್ನು ’ಕವಿವರರ ಕಾಮಧೇನು’, ’ದಾನ ಚಿಂತಾಮಣಿ’ ಎಂದು ರನ್ನ ಹೊಗಳಿರುವುದು ಹೆಚ್ಚಿನ ಮಾತಲ್ಲ. ಅತ್ತಿಮಬ್ಬೆ ಹೊಸಕಾವ್ಯದ ರಚನೆಗೆ ಉತ್ತೇಜನ ಕೊಟ್ಟಿದ್ದು ಮಾತ್ರವಲ್ಲ; ಹಿಂದಿನ ಕಾವ್ಯಗಳ ರಕ್ಷಣೆಗೂ ಗಮನಹರಿಸಿದಳು. ಪೊನ್ನನ ಶಾಂತಿಪುರಾಣ ಹೂತು. ಕೆಟ್ಟುಹೋಗುತ್ತದೆ ಎಂದು ಅದರ ಒಂದು ಸಾವಿರ ಪ್ರತಿಗಳನ್ನು ಮಾಡಿಸಿ ಹಂಚಿಸಿದಳು. ಅಚ್ಚಿನ ಅನುಕೂಲ ಇಲ್ಲದಿದ್ದ ಆ ಕಾಲದಲ್ಲಿ, ಸಂಪ್ರತಿಕಾರರಿಂದ ಪ್ರತಿ ಮಾಡಿಸಲು ಅಂಥವರು ಎಷ್ಟು ಜನಬೇಕು, ಅಷ್ಟು ಜನಕ್ಕೂ ಎಷ್ಟು ಹಣ ವೆಚ್ಚಮಾಡಬೇಕು ಎಂಬುದನ್ನು ಊಹಿಸಿಕೊಳ್ಳಬಹುದು. ಈ ಸಂಗತಿಯನ್ನು ರನ್ನ ಹೇಳಿರದಿದ್ದರೂ, ಅವನಿಗೆ ಅದು ಗೊತ್ತಿದ್ದಿರಬೇಕು; ಶಾಂತಿಪುರಾಣದ ಕೊನೆಯ ಹೆಚ್ಚಿನ ಪದ್ಯಗಳಲ್ಲಿ ಇದನ್ನು ವರ್ಣಿಸಿದೆ. ಅತ್ತಿಮಬ್ಬೆ ಒಂದು ಸಾವಿರದ ಐದನೂರು ರತ್ನಖಚಿತವಾದ ಚಿನ್ನದ ಜಿನ ಪ್ರತಿಮೆಗಳನ್ನು ಮಾಡಿಸಿ ದಾನ ಮಾಡಿದ್ದನ್ನು ರನ್ನ ವರ್ಣಿಸಿದ್ದಾನೆ. ಅತ್ತಿಮಬ್ಬೆ ಒಂದು ಜಿನೇಂದ್ರ ಗೃಹವನ್ನು ಕಟ್ಟಿಸಿದ ಸಂಗತಿಯೂ ಒಂದು ಶಾಸನದಿಂದ ತಿಳಿದುಬರುತ್ತದೆ. ಅತ್ತಿಮಬ್ಬೆಯ ವ್ರತನಿಷ್ಠೆಯನ್ನೂ ದಾನಗುಣವನ್ನೂ ಕೆಲವೇ ಮಾತುಗಳಲ್ಲಿ ಹಿಡಿದಿಟ್ಟಿರುವ ರನ್ನನ ಒಂದು ಪದ್ಯವನ್ನು ಎತ್ತಿ ಬರೆದು ಈ ಪ್ರಕರಣವನ್ನು ಮುಗಿಸಬಹುದು.: 


ಚಕ್ರವರ್ತಿ ತೈಲಪನು ರನ್ನನಿಗೆ ಚಕ್ರವರ್ತಿ ಎಂಬ ಬಿರುದನ್ನು ಕೊಟ್ಟನು

“ಒಡಲನ್ ಉಪವಾದಿಂ ತ-

ನ್ನೊಡಮೆಯನ್ ಅನವರತದಾನದಿಂ ತವಿಸಿ, ಜಸಂ-

ಬಡೆದಳ್; ನೂರ್ಮಡಿ ತೈಲನ

ಪಡೆವಳ ತೈಲನ ಜನನಿಗೆ ಎಣೆ ಪೆರರ್ ಒಳರೇ?”

“ಅತ್ತಮಬ್ಬೆ ತನ್ನ ದೇಹವನ್ನು ಉಪವಾಸದಿಂದ ಬಡವಾಗಿಸಿದಳು. ತನ್ನ ಸಂತ್ತನ್ನು ನಿತ್ಯ ದಾನದಿಂದ ಬರಿದು ಮಾಡಿಕೊಂಡಳು; ಹೀಗೆ  ಮಾಡಿ, ಯಶಸ್ಸನ್ನು ಪಡೆದಳು. ತೈಲಪನ ಸೇನಾಪತಿಯಾದ ತೈಲನ ತಾಯಿಗೆ ಸಮಾನರು ಬೇರೆ ಯಾರಾದರೂ ಇದ್ದಾರೆಯೇ?”

ಅಜಿತ ಪುರಾಣ

ಎರಡನೆಯ ತೀರ್ಥಂಕರನಾದ ಅಜಿತನಾಥನನ್ನು ಕುರಿತ ಪುರಾಣಕಾವ್ಯ  ಈ ಕೃತಿ. ಪಂಪನ ಆದಿಪುರಾಣಕ್ಕೂ ಪೊನ್ನನ ಶಾಂತಿಪುರಾಣಕ್ಕೂ ಇದು ಸರಿಸಮಾನ ಎಂದು ರನ್ನ ಹೊಗಳಿಗೊಂಡಿದ್ದಾನೆ.

ತೀರ್ಥಂಕರ ಎಂದರೆ – ’ಹುಟ್ಟು ಸಾವುಗಳಿಂದ ಕೂಡಿದ ಸಂಸಾರ ಸಾಗರವನ್ನು ದಾಟಿಸಿ, ಮೋಕ್ಷವನ್ನು ಕೊಡತಕ್ಕವನು,’ಅಥವಾ ’ಜಗತ್ತನ್ನು ಉದ್ಧಾರ ಮಾಡುವ ಧರ್ಮವೆಂಬ ತೀರ್ಥವನ್ನು ಉತ್ಪತ್ತಿ ಮಾಡತಕ್ಕವನು’ ಎಂದು ಅರ್ಥ. ತೀರ್ಥಂಕರರೂ ನಮ್ಮಂತೆಯೇ ಮನುಷ್ಯರು. ಪಾಪ ಕರ್ಮದಿಂದ ಪ್ರಾಣಿ ಜನ್ಮ,, ನರಕವಾಸ, ಮುಂತಾದ ಕೀಳುಗತಿಯೂ, ಪುಣ್ಯಕರ್ಮದಿಂದ ಸ್ವರ್ಗಸುಖವನ್ನು ಅನುಭವಿಸುವ ದೇವಜನ್ಮವೂ ದೊರಕುವುವು. ಇದು ಜೈನಧರ್ಮದ ನಂಬಿಕೆ-ಹಿಂದೂ  ಧರ್ಮದಲ್ಲಿ ಇರುವಂತೆ. ಪ್ರತಿ ಜನ್ಮದಲ್ಲಿಯೂ ಪುಣ್ಯ ಪಾಪ ಕಾರ್ಯಗಳನ್ನು ಮಾಡುತ್ತಲೇ ಇರುವುದರಿಂದ, ಜನ್ಮಾಂತರ ಅಥವಾ ಭವಾಂತರಗಳಿಗೆ ಕೊನೆ ಮೊದಲೇ ಇಲ್ಲ. ಪಾಪಕರ್ಮದ ಕಡೆಗೆ ಮನಸ್ಸು ಹೋಗದಂತಹ ಉತ್ತಮವಾದ ಮಟ್ಟದಲ್ಲಿ ಇರುತ್ತದೆ ತೀರ್ಥಂಕರನಾಗುವ ಜೀವಿಯ ಬದುಕು. ಹೀಗೆ, ತೀರ್ಥಂಕರರ ಕಥೆಗಳಲ್ಲಿ ಮಾನವಜನ್ಮ – ದೇವಜನ್ಮ, ಈ ಎರಡರ ನಡುವೆ ಜೀವನು ತೊಳಲಾಡುತ್ತಿರುತ್ತಾನೆ. ತೀರ್ಥಂಕರನಾಗುವ ಜೀವನು ಜನ್ಮ ಜನ್ಮಾಂತರಗಳಲ್ಲಿ ತೊಳಲಿ, ಕಡೆಗೆ ಒಂದು ಜನ್ಮದಲ್ಲಿ ಅತ್ಯಂತ ವೈರಾಗ್ಯಹೊಂದಿ, ತಪಸ್ಸುಮಾಡಿ ಕರ್ಮದ ಕಟ್ಟಿನಿಂದ ಬಿಡುಗಡೆ ಹೊಂದಿ, ತಪಸ್ಸು ಮಾಡಿ ಕರ್ಮದ ಕಟ್ಟಿನಿಂದ ಬಿಡುಗಡೆ ಹೊಂದಿ, ಶಾಶ್ವತವಾದ ಮೋಕ್ಷವನ್ನು ಪಡೆಯುತ್ತಾನೆ. ಜನ್ಮಾಂತರಗಳ ಕಥೆಯನ್ನು ’ಭವಾವಳಿ’ ಎಂದು ಕರೆದಿದೆ. ಸಾಧಾರಣವಾಗಿ ಪ್ರತಿ ತೀರ್ಥಂಕರನ ಕಥೆಯಲ್ಲಿಯೂ ಈ ಭವಾವಳಿಯ ಕಥೆ ಉಂಟು.ತೀರ್ಥಂಕರನೆನಿಸುವವನು ಕಡೆಯಲ್ಲಿ ಹುಟ್ಟು ಸಾವುಗಳನ್ನು ಗೆಲ್ಲುವುದರಿಂದ ’ಜಿನ’ ಎನ್ನಿಸಿ ಕೊಳ್ಳುತ್ತಾನೆ. ಜಿನ ಎಂದರೆ ಗೆದ್ದವನು ಎಂದು ಅರ್ಥ. ತೀರ್ಥಂಕರರು ಇತರರಿಗೆ ಮೋಕ್ಷ ಕೊಡಬಲ್ಲ ಜಿನ ಧರ್ಮವನ್ನು ಬೋಧೆ ಮಾಡಿ, ಕೈವಲ್ಯ ಪದವಿಯಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ. ಕೈವಲ್ಲಯ ಎಂದರೆ ಮೋಕ್ಷ. ಆದ್ದರಿಂದ ಜಿನರು ’ಕೇವಲಿ’ ಗಳು ಎನ್ನಿಸಿಕೊಳ್ಳುತ್ತಾರೆ. ಇವರು ಪಡೆಯುವ ಜ್ಞಾನವೇ ಕೇವಲಜ್ಞಾನ. ಜೈನ ಧರ್ಮದಲ್ಲಿ ಇಂಥ ೨೪ ಮಂದಿ ತೀರ್ಥಂಕರರು ಆಗಿ ಹೋಗಿದ್ದಾರೆ. ಅಜಿತನಾಥನು ಎರಡನೆಯ ತೀರ್ಥಂಕರ.

ಪಂಪನು ಬರೆದಿರುವ ಆದಿಪುರಾಣದಲ್ಲಿ, ಮೊದಲನೆಯ ತೀರ್ಥಂಕರನಾದ ವೃಷಭಸ್ವಾಮಿಯ ’ಭವಾವಳಿ’ಯ ಕಥೆ ಅವನ ಹತ್ತು ಜನ್ಮಗಳನ್ನು ಒಳಗೊಂಡಿದೆ. ಅಜಿತನಾದರೂ ಎರಡೇ ಜನ್ಮಗಳಲ್ಲಿ ಮೋಕ್ಷಕ್ಕೆ ಅರ್ಹನಾದನು.

ಅಜಿತನು ಅದಕ್ಕೆ ಹಿಂದಿನ ಜನ್ಮದಲ್ಲಿ ವತ್ಸಕಾವತೀ ದೇಶದಲ್ಲಿ ಸುಸೀಮಾ ನಗರದಲ್ಲಿ ವಿಮಲವಾಹನನೆಂಬ ರಾಜನಾಗಿದ್ದನು. ಅವನು ಒಂದು ದಿನ ಕನ್ನಡಿಯಲ್ಲಿ ಕೆನ್ನೆಯ ಮೇಲೆ ನರೆತ ಕೂದಲನ್ನು ಕಂಡನು. ದೇಹ ದುಃಖಕ್ಕೆ ಕಾರಣ ಎಂದು ತೋರಿತು. ವೈರಾಗ್ಯ ಹುಟ್ಟಿತು. ಸಂಸಾರ ನಿಸ್ಸಾರವೆಂದು ಕಂಡಿತು : ’ ಕಡೆಯಿಲ್ಲದ ಸಂಸಾರದ ಕಡೆಯನ್ನು ಕಾಣಬೇಕೆಂಬ ಇಷ್ಟ ನಿನಗಿದ್ದರೆ ಮೋಕ್ಷದ ಕಡೆಗೆ ಮನಸ್ಸು ಕೊಡು.ಎಲೆ ಜೀವ,ನಿನ್ನ ಕಾಲುಹಿಡಿದು ಕೇಳಿಕೊಳ್ಳತ್ತೇನೆ.ನನ್ನ ಮಾತು ಕೇಳು : ಧರ್ಮವನ್ನು ಬಿಗಿಯಾಗಿ ಹಿಡಿದುಕೋ” ಎಂದು ಬದುಕನ್ನು ಮೋಕ್ಷದ ಕಡೆಗೆ ತಿರುಸಿದನು. ವೈರಾಗ್ಯ ಹೊಂದಿದ ವಿಮಲವಾಹನನು ತನ್ನಮಗನಿಗೆ ಪಟ್ಟಕಟ್ಟ ತಪಸ್ಸಿಗಾಗಿ ಕಾಡಿಗಡ ತೆರಳಿದನು. ಜ್ಯೆನದೀಕ್ಷೆಯನ್ನು ಪಡೆದು, ತಪಸ್ಸು ಮಾಡಿ, ಧ್ಯಾನ ಮಾಡುತ್ತ ಮರಣ ಹೊಂದಿದನು. ಮರುಜನ್ಮದಲ್ಲಿ, ಸ್ವರ್ಗದಲ್ಲಿ ಅಹಮಿಂದ್ರನೆಂಬ ದೇವನಾಗಿ ಹಿಟ್ಟಿದನು ಬೇಕಾದಷ್ಟು ಸ್ವರ್ಗಸುಖವನ್ನು ಅನುಭವಿಸಿದನು. ಬಹುದೀರ್ಘಕಾಲದ ಸ್ವರ್ಗವಸದ ಆಯುಷ್ಯ ಕೊಡ ತೀರಿಹೋಗುವ ಸಮಯ ಬಂತು.ತನು ತೀರ್ಥಂಕರನಾಗಿ ಹುಟ್ಟವ ಸೂಚನೆಗಳು ಕಂಡು ಬಂದು, ಅಜನ್ಮವೆತ್ತಲು ಸಿದ್ದನಾದನು.

ಎಲ್ಲ ತೀರ್ಥಂಕರ ಪುರಾಣಗಳಲ್ಲಿರುವಂತೆ ಇಲ್ಲಿಯೂ ಪಂಚಕಲ್ಯಾಣಗಳ ವರ್ಣನೆ ಬರುತ್ತದೆ. ಪಂಚಕಲ್ಯಾಣ ಎಂದರೆ, ತೀರ್ಥಂಕರನ ಜೀವನದ ಐದು ಮುಖ್ಯ ಮಂಗಳಕರವಾದ ಸಂಗತಿಗಳು.ಇವು ಹೀಗಿವೆ : ಪ್ರತಿಯೆಬ್ಬ ತೀರ್ಥಂಕರನೂ ಭೂಲೋಕದಲ್ಲಿ ಅವತರಿಸುವುದಕ್ಕೆ ಮುಂಚೆ ದೇವತೆಯಾಗಿರುತ್ತಾನೆ. ಅವನು ಸ್ವರ್ಗವನ್ನು ಬಿಟ್ಟು, ತಾನು ಹುಟ್ಟಲಿರುವ ತಾಯಿಯ ಬಸಿರನ್ನು ಪ್ರವೇಶಿಸುವುದು ಮೊದಲನೆಯ (೧) ಗರ್ಭಾವತರಣ ಕಲ್ಯಾಣ. ಜಿನಶಿಶು ಹಿಟ್ಟಿದ ಮೇಲೆ, ಇಂದ್ರನು ತಾಯಿಗೆ ಗೊತ್ತಾಗದಂತೆ ಜಿನಶಿಶುವನ್ನು ತರಿಸಿಕೊಂಡು ಶಿಶುವಿಗೆ ಹಾಲಿನ ಅಭಿಷೇಕ ಮಾಡಿ, ನಾಮಕರಣ ಮಾಡುವನು. ಇದು (೨)ಜನ್ಮಾಭಿಷೇಕ ಕಲ್ಯಾಣ.ತೀರ್ಥಂಕರನಾಗುವವನು ಸಂಸಾರ ಸುಖವನ್ನು ಅನುಭವಿಸಿದ ಮೇಲೆ ವೈರಾಗ್ಯ ಹೊಂದಿ ತಪಸ್ಸು ಮಾಡಲು ವನಕ್ಕೆ ತೆರಿಳುವುದು, (೩) ಪರಿನಿಷ್ಕ್ರಮಣ ಕಲ್ಯಾಣ (ನಿಷ್ಕ್ರಮಣ ಎಂದರೆ ಮನೆ ಬಿಟ್ಟು ಹೊರಟು ಹೋಗುವುದು). ಅನಂತರ ಅವನು ಕಾಡಿನಲ್ಲಿ ಉಗ್ರವಾದ ತಪಸ್ಸು ಮಾಡಿ, ಹಿಂದಿನ ಜನ್ಮದ ಕರ್ಮಗಳನ್ನು ನಾಶಮಾಡಿಕೊಳ್ಳುವನು. ಅನಂತರ, ಭಿಕ್ಷೆಯೆತ್ತುತ್ತಾ ಊರೂರು ಅಲೆಯುವನು.ಶುಭಘಳಿಗೆಯಲ್ಲಿ ಅವನಿಗೆ ’ಕೇವಲ  ಜ್ಞಾನ’ ಹುಟ್ಟವುದು. ಇದು (೪) ಕೇವಲ ಜ್ಞಾನೋತ್ಪತ್ತಿ ಕಲ್ಯಾಣ. ಕೇಲಜ್ಞಾನವನ್ನು ಪಡೆದ ತೀರ್ಥಂಕರನಾಗುವನು. ಪಡೆದ ತೀಥಂಕರನಾಗುವನು. ಇವನ ಧರ್ಮೋಪದೇಶ ಮಾಡಲು ದೇವೇಂದ್ರನು ಒಂದು ಭವ್ಯವಾದ ಮಂಟಪವನ್ನು ನಿರ್ಮಿಸಿಕೊಡುವನು. ಇದಕ್ಕೆ ಸಮವಸರಣ ಮಂಟಪ ಎಂದು ಹೆಸರು.ಇಲ್ಲಿ ತೀರ್ಥಂಕರನ ಉಪದೇಶವನ್ನು ದೇವತೆ, ಮನುಷ್ಯರು, ಸಕಲ ಪ್ರಾಣಿಗಳೆಲ್ಲರೂ ಕೇಳುವರು.ಅಜಿತ ತೀರ್ಥಂಕರನು ಬಹು ದೀರ್ಘಕಾಲ ಈ ರೀತಿ ಉಪದೇಶಮಾಡಿ,ತನ್ನ ಆಯುಷ್ಯದಲ್ಲಿ ಒಂದು ತಿಂಗಳು ಉಳಿದಿರುವಾಗ, ’ಶುಕ್ಲಧ್ಯಾನ ’ ಎಂಬ ಶ್ರೇಷ್ಠ ರೀತಿಯ ಧ್ಯಾನದಿಂದ ಅತ್ಯಂತ ಸೂಕ್ಷ್ಮವಾದ ಕರ್ಮಗಳನ್ನು ನಾಶಮಾಡಿಕೊಂಡು ಮುಕ್ತಿಯನ್ನು ಪಡೆಯುವನು. ಇದೇ ಕಡೆಯ (೫) ಪರಿನಿರ್ವಾಣ ಕಲ್ಯಾಣ. ರನ್ನನು ಈ ಪಂಚಕಲ್ಯಾಣಗಳನ್ನು ತನ್ನದೇ ಆದ ಘನವಾದ ಶೈಲಿಯಲ್ಲಿ ಹೇಳಿಕೊಂಡು ಹೋಗಿದ್ದಾನೆ. ಇದು ಪುರಾಣವಾದ್ದರಿಂದ, ಶಾಸ್ತ್ರ ವಿಚಾರ ತುಂಬಿಹೋಗಿದೆ; ಸಾಲದುದಕ್ಕೆ, ಅಜಿತನ ಕಥೆಯಲ್ಲಿ ಜನ್ಮಾಂತರಗಳ ಸಂಖ್ಯೆ ಕಡಿಮೆ; ಸ್ವಾರಸ್ಯವಾದ ಸನ್ನಿವೇಶಗಳೂ ಕಡಿಮೆ. ಆದ್ದರಿಂದ ರನ್ನನ ಕವಿತಾಶಕ್ತಿ ಒಂದೇ ಸಮನಾಗಿ ಇಲ್ಲಿ ಕಾಣಿಸಿಕೊಳ್ಳಲು ಅವಕಾಶವಿಲ್ಲ. ಆದರೂ, ಇಲ್ಲಿ ಕನ್ನಡ ಭಾಷೆ ತಿಳಿಯಾಗದೆ. ಹೇಳಿದ ಅರ್ಥವನ್ನು ಒತ್ತಿ ಒತ್ತಿ ಮನಸ್ಸಗೆ ಹಿಡಿಸುವಂತೆ ಮಾಡುತ್ತಾನೆ.

ಅಜಿತನು ತಪಸ್ಸಿಗೆ ಕುಳಿತಾಗ ಅವನ ಶಾಂತ ಮೂರ್ತಿಯನ್ನು ರನ್ನ ಹೀಗೆ ಕಡೆದಿಟ್ಟದ್ದಾನೆ ;

ವದನಂ ಸ್ತಿಮಿತಾಕ್ಷಂ, ಶ್ಲಿ –

ಷ್ಟದಂತಂ, ಅಷ್ಟಾಂಗಪಾತಂ, ಅಭ್ರೂಭಂಗಾ –

ಸ್ವದಂ,ಎಸೆದುದು ಯೋಗ ನಿಯೋ –

ಗದೊಳಜಿತ ಮಹಾಮುನಿಂದ್ರ ವೃಂದಾರಕನಾ.

ಅಜಿತ ಮಹಾಮುನಿ ಯೋಗದಲ್ಲಿ ಕುಳಿತಿದ್ದಾಗ ಅವನ ಮುಖದಲ್ಲಿ ಕಣ್ಣು ಏನನ್ನೂ ನೋಡದೆ ಇದ್ದವು; ಹಲ್ಲು ಕೂಡಿಕೊಂಡಿದ್ದುವು; ಹುಬ್ಬು ಅಲುಗಡುತ್ತಿರ ಲಿಲ್ಲ ; ಮುಖ ಎಂಟು ಬಗೆಯ ಧ್ಯಾನದಲ್ಲಿ ನೆಲೆಸಿತ್ತು.

ಆದಿ ಪುರಾಣದಲ್ಲಿ ವೃಷಭನ ಕಥೆಯೊಂದಿಗೆ ಆಕಾಲದ ಚಕ್ರವರ್ತಿಯಾಗಿದ್ದ ಭರತನ ಕಥೆ ಬರುವಂತೆ, ಅಜಿತನ ಕಥೆಯಲ್ಲಿ ಸಗರಚಕ್ರವರ್ತಿಯ ಕಥೆ ಬರುತ್ತದೆ.

ಸಗರನಿಗೆ ಅರವತ್ತು ಸಾವಿರ ಮಂದಿ ಪುತ್ರರು ! ಇವರಲ್ಲರೂ ಸಾಯುವಂತೆ ಒಂದು ಸನ್ನಿವೇಶ ಸೃಷ್ಟಿಯಾಗಿದೆ. ಅವರು ನಿಜವಾಗಿ ಸತ್ತಿರುವುದಿಲ್ಲ. ಯಾರಿಗೂ ಸಾವು ತಪ್ಪಿದ್ದಲ್ಲ. ಚಕ್ರವರ್ತಿಯಾದರೂ ಭೂಮಂಡಲವನ್ನು ಗೆಲ್ಲಬಹುದು, ಸಾವನ್ನು ಗೆದ್ದು ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಸತ್ಯ ಸಗರನಿಗೆ ಮನದಟ್ಟಾಗುತ್ತದೆ. ಅವನು ವೈರಾಗ್ಯ ಹೊಂದಿ, ಮಕ್ಕಳೊಂದಿಗೆ ಅಜಿತನಿಂದ ಧರ್ಮೋಪದೇಶವನ್ನು ಕೇಳುತ್ತಾನೆ. ಇವರೆಲ್ಲರೂ ತಪಸ್ಸುಮಾಡಿ ಮೋಕ್ಷವನ್ನು ಪಡೆಯುತ್ತಾರೆ.


‘ಸಾಹಸಭೀಮ ವಿಜಯ’ ಅಥವಾ ‘ಗದಾಯುದ್ಧ’

       ಜೈನನಾದ ರನ್ನ ವೈದಿಕಮತದ ಚಾಳುಕ್ಯ ದೊರೆಗಳ ಆಶ್ರಯವನ್ನು ಪಡೆದಮೇಲೆ  ಕಾವ್ಯ ರಚಿತವಾಯಿತು. ಎರಡನೆಯ ತೈಲಪ ಚಕ್ರವರ್ತಿಯಾಗಿದ್ದಾಗ ಯುವರಾಜ ಸತ್ಯಾಶ್ರಯ ಇರಿವಬೆಡಂಗನು ಅನೇಕ ಯುದ್ಧಗಳಲ್ಲಿ ಭಾಗವಹಿಸಿ, ಕನ್ನಡ ರಾಜ್ಯವನ್ನು ಶತ್ರುಗಳ ಆಕ್ರಮಣದಿಂದ ಉಳಿಸಿದನು. ಇದರಿಂದ, ಕನ್ನಡ ಸಾಹಿತ್ಯದ ಉಳಿವಿಗೂ ಏಳಿಗೆಗೂ ಸಹಾಯವಾಯಿತು. ರನ್ನನು ಸತ್ಯಾಶ್ರಯನ ಸಾಹಸಕಾರ್ಯಗಳಲ್ಲಿ ಮಹಾಭಾರತದ ಭೀಮನ ಸಾಹಸ ಪರಂಪರೆಯನ್ನು ಗುರುತಿಸಿದನು.ಸತ್ಯಾಶ್ರಯನು ಸಾಹಸರ್ಯಗಳಲ್ಲಿ ಮಹಾಭಾರತ ಭೀಮನ ಸಾಹಸ ಪರಂಪರೆಯನ್ನು ಗುರುತಿಸಿದನು. ಸತ್ಯಾಶ್ರಯನು ಸಾಹಸಭೀಮನಾಗಿ ವಂಶಾವಳಿಯನ್ನೂ ಸಾಹಸ ವಿಜಯಗಳನ್ನೂ ವರ್ಣಿಸಿ, ಕಾವ್ಯ ಬರೆಯುವುದರಲ್ಲಿ ತನ್ನ ಗುರಿ ಏನು ಎನ್ನುವುದನ್ನು ತಿಳಿಸಿದ್ದಾನೆ:

“ಪೃಥ್ವೀವಲ್ಲಭನಾದ ಸತ್ಯಾಶ್ರಯದೇವನೆ ಕಥಾ ನಾಯಕ. ಅವನನ್ನು ಭೀಮನೊಂದಿಗೆ ಹೋಲಿಸಿ ಮಹಾಕವಿ ರನ್ನನು ಈ ಗಧಾಯುದ್ಧವನ್ನು ಹೇಳಿದನು. ಚಕ್ರವರ್ತಿ ಸಾಹಸಭೀಮನೇ ಕಾವ್ಯಕ್ಕೆ ಒಡೆಯ.”

“ಕೌರವರ ಮೇಲೆ ಬದ್ಧವೈರವನ್ನು ಹೊಂದಿದ ಪ್ರಸಿದ್ಧರಾದ ಕುಂತೀಪುತ್ರರಲ್ಲಿ. ಹಗೆ ತೀರಿಸಿಕೊಳ್ಳವ ವಿಷಯದಲ್ಲಿ, ಭೀಮ ಮೊದಲು ಬರತಕ್ಕವನು. ಪಾಂಡವರ ಮೇಲೆ ಬದ್ಧ ವೈರ ಸಾಧಿಸುವ ವಿಷಯದಲ್ಲಿ ದುರ್ಯೋಧನ ಮೊದಲಿಗೆ. ಧರ್ಮಯುದ್ಧದಲ್ಲಿ ಭೀಮನು ಅವನನ್ನು ಕೊಂದನು.ಆದರಿಂದ ಭೀಮ ಜಯೋದ್ಧಾಮ. ಅವರಿಬ್ಬರ ಗದಾಯುದ್ಧವನ್ನು ರನ್ನ ಹೇಳಿದ್ದಾನೆ”.

“ಒಳಹೊಕ್ಕು ನೋಡಿದರೆ ಭಾರತದೊಳಗಣ ಕಥೆಯೆಲ್ಲವೂ ಗದಾಯುದ್ಧದಲ್ಲಿ ಒಳಗೊಂಡಿದೆ” ಎಂದು ಹೇಳಲು ಸಾಧ್ಯವಾಗುವಂತೆ ಸಿಂಹಾವಲೋಕನಕ್ರಮದಿಂದ ರನ್ನ ಕಥೆ ಹೇಳಿದ್ದಾನೆ ಕಾಡಿನಲ್ಲಿ ಸುತ್ತ ಮುತ್ತ  ತನ್ನ ಆಹಾರದ ಪ್ರಾಣಿಗಳು ಎಲ್ಲಿವೆ ಎಂದು ಸಿಂಹ ಈ ಕೊನೆಯಿಂದ ಆ ಕೊನೆಯವರೆಗೆ ಮುಖ ಹೊರಳಿಸಿ, ಹುಡುಕುನೋಟವನ್ನು ಬೀರುವುದಂತೆ, ಆ ರೀತಿಯಲ್ಲಿ ಭಾರತದ ಆದಿಯಿಂದ ಅಂತ್ಯದವರೆಗೆ ರನ್ನನು ತನ್ನ ದೃಷ್ಟಿಯನ್ನು ಹಾಯಿಸಿ, ಭಾರತದ ಮುಖ್ಯ ಕಥಾಪ್ರಸಂಗಗಳೆಲ್ಲವೂ ಓದುಗರ ನೆನಪಿಗೆ ಬರುವಂತೆ ಅವುಗಳನ್ನು ಬಲು ಚಮತ್ಕಾರದಿಂದ ಪಾತ್ರಗಳ ಬಾಯಿಂದ ಹೇಳಿಸಿದ್ದಾನೆ.

ಗದಾಯುದ್ಧದಲ್ಲಿ  ಅಜಿತಪುರಾಣದಲ್ಲಿರುವಂತೆ ಕಥೆಗೆ ಬೇಕಿಲ್ಲದ ವರ್ಣನೆಗಳ ಹಾವಳಿಯಿಲ್ಲ. ಓದುಗರು ಮತ ವಿಚಾರಶಾಸ್ತ್ರದ ಮರುಭೂಮಿಯಲ್ಲಿ ಪ್ರಯಾಣ ಮಾಡಿ ಬಳಲಬೇಕಾಗಿಲ್ಲ. ಮೊದಲಿಂದ ಕಡೆಯವರೆಗೆ ವೀರ, ಕರುಣ, ರೌದ್ರ, ಅದ್ಭುತ ರಸಗಳ ಪ್ರವಾಹದಲ್ಲಿ ರನ್ನ ನಮ್ಮನ್ನು ತೇಲಿಸಿಕೊಂಡು ಹೋಗುತ್ತಾನೆ. ’ರಸಘಟ್ಟ’ ಎಂಬ ಮಾತು ಅಜಿತಪುರಾಣಕ್ಕಿಂತ ಹೆಚ್ಚಾಗಿ ಈ ಕಾವ್ಯಕ್ಕೆ ಸಲ್ಲುತ್ತದೆ.

ಗದಾಯುದ್ಧವನ್ನು ಓದುತ್ತಿದ್ದರೆ ಕಾವ್ಯವನ್ನು ಓದಿದಂತೆ ನಮಗೆ ಅನ್ನಿಸುವುದೇ ಇಲ್ಲ. ನಾಟಕವನ್ನು ನೋಡಿದಂತೆ ಭಾಸವಾಗುತ್ತದೆ. ಕವಿ ಹಿಂದೆ ನಿಂತು, ಪಾತ್ರಗಳ ಸಂಭಾಷಣೆಗಳ ಮೂಲಕ ಕಥೆ ಹೇಳುತ್ತಾನೆ.

ಈಗ ’ಗದಾಯುದ್ಧ ನಾಟಕ ’ ದ ಕೆಲವು ದೃಶ್ಯಗಳನ್ನು ನೋಡೋಣ.

ಗದಾಯುದ್ಧದ ಕಥೆ ಭೀಮ ದ್ರೌಪದಿಯರ ಸಂಭಾಷಣೆಯಿಂದ ಮೊದಲಾಗುತ್ತದೆ ಒಬ್ಬ ವೃದ್ಧ ಕಂಚುಕಿ ಮತ್ತು ಕೆಳದಿಯೊಂದಿಗೆ ದ್ರೌಪದಿ ಭೀಮನಲ್ಲಿಗೆ ಬಂದು ದು:ಖವನ್ನು ತೋಡಿಕೊಳ್ಳುತ್ತಾಳೆ.

ದ್ರೌಪದಿ -ಕೃಷ್ಣನು ಸಂಧಿ ಮಾಡುವುದಕ್ಕೆ ಯತ್ನಿಸಿದ. ನನ್ನ ನಿನ್ನ ಪುಣ್ಯದಿಂದ ಅದು ಕೈಗೂಡಲೊಲ್ಲ. ಸುಯೋಧನ (ದುರ್ಯೋಧನ)ನೊಬ್ಬನು ಉಳಿದುಕೊಂಡು ಶತ್ರು ಸೈನ್ಯವೆಲ್ಲ ನಾಶವಾಗಿದೆ. ಭೀಷ್ಮ ಧೃತರಾಷ್ಟ್ರರು ಇದ್ದಾರೆ. ಅವರು ಹೇಳಿದರೆ, ನಮ್ಮ ರಸನು ಅವರ ಮಾತು ಕೇಳಿ ಎಲ್ಲಿ ಸುಯೋಧನನೊಂದಿಗೆ ಸಂಧಿಮಾಡಿಕೊಂಡು ಬಿಡುತ್ತಾನೋ ಎಂದು ನನಗೆ ವ್ಯಥೆಯಾಗಿದೆ. ಕೌರವರಿಗೆ ಯಮನಂತಿರುವ ನೀನೆ ನನ್ನ ಸಂಶಯವನ್ನು ಕಳೆಯಬೇಕು. ಧರ್ಮಸುತನಿಂದ ಸಂಧಿಯಾದರೆ, ನಿಮಗೆ ಮತ್ತೆ ವನವಾಸವೇ ಗತಿ ನಾನು ಅಗ್ನಿಯಲ್ಲಿ ಹುಟ್ಟಿದೆ; ಅಗ್ನಿಗೆ ಬಿದ್ದು ಸಾಯುತ್ತೇನೆ. ದುಶ್ಯಾಸನನ ರಕ್ತವನ್ನು ಕುಡಿದಾಗ, ಆ ರಕ್ತ ನಿನ್ನ ಕೋಪವನ್ನು ತಣ್ಣಗೆ ಮಾಡಿತೇನು?

(ದ್ರೌಪದಿ ಅಗ್ನಿಯಲ್ಲಿ ಹುಟ್ಟಿದವಳು  ಎಂದು ನಂಬಿಕೆ  ತಮಗೆ ಎಲ್ಲ ಬಗೆಗಳಲ್ಲಿ ಅನ್ಯಾಯ ಮಾಡಿದ ದುರ್ಯೋಧನನಿಗೆ ಶಿಕ್ಷೆಯಾಗಿದೆ ಹೋದರೆ ತಾನು ಬೆಂಕಿಯಲ್ಲಿ ಬಿದ್ದು ಪ್ರಾಣಬಿಡುತ್ತೇನೆಂದು ದ್ರೌಪದಿಯ ಸೂಚನೆ).

ಕ್ಷತ್ರಿಯನಿಗೆ ಕೋಪ ಬರದಿದ್ದರೆ, ಉತ್ಸಾಹ ಹುಟ್ಟುವುದಿಲ್ಲ; ಉತ್ಸಾಹ ಹುಟ್ಟಿದೆ ವೀರ ಉಕ್ಕುವುದಿಲ್ಲ. ಕೌರವರಿಂದ ಮಾನಭಂಗ ಹೊಂದಿದ್ದ ದ್ರೌಪದಿಯ ಮನಸ್ಸು ಭೀಮನಿಗೆ ಅರ್ಥವಾಯಿತು. ಹಿಂದೆ ಅಣ್ಣನ ಸತ್ಯವಚನಕ್ಕೆ ಕಟ್ಟುಬಿದ್ದು ತಾನೂ ಅರ್ಜುನನೂ ಸುಮ್ಮನಿದ್ದುದಾಯಿತು. ಇನ್ನು ಸುಮ್ಮನಿರಲು ಸಾಧ್ಯವಿಲ್ಲ. ಪಶ್ಚಾತ್ತಾಪಪಟ್ಟು ನುಡಿದ.

’ದುಶ್ಯಾಸನನು ಎಳೆದಾಡಿದ ನಿನ್ನ ಕೂದಲರಾಶಿ ಇಳಿದುಬಿದ್ದಿರುವಾಗ, ನಿನ್ನ ಮುಖದಲ್ಲಿ ಕಣ್ಣೀರು ಇಳಿಯುತ್ತಿರುವಾಗ, ಈ ಭೀಮನ ಕೋಪ ಇಳಿದು ಹೋಗುತ್ತದೆಯೇನು? ನೀನು ಅಗ್ನಿಪುತ್ರಿ; ನಾನು ವಾಯುಪುತ್ರ, ನಾನಿರುವವರೆಗೆ ಸಂಧಿಯ ಮಾತೆಲ್ಲಿ? ಕಿಚ್ಚೂ ಗಾಳಿಯೂ ಜೊಗೆಗೂಡಿದರೆ ಹಗೆಯನ್ನು ಸುಟ್ಟು ಹಾಕದೇ ಇದ್ದೀತೆ? ಕೌರವರ ಮಕ್ಕಳನ್ನು ಕೊಂದಿದ್ದೇನೆ. ಕೌರವನ ತಮ್ಮನ (ದುಶ್ಯಾಸನ) ರಕ್ತವನ್ನು ಕುಡಿದಿದ್ದೇನೆ. ಎರಡು ಪ್ರತಿಜ್ಞೆಗಳನ್ನು ತೀರಿಸಿ ಆಯ್ತು. ಹಗೆಯನ್ನು ತೀರಿಸದೆ ಇರುವೆನೆ?

ಕೌರವನ ತೊಡೆಗಳನ್ನು ಮುರಿದು ಹಾಕುತ್ತೇನೆ. ಅವನ ಕಿರೀಟವನ್ನು ಒದೆಯುತ್ತೇನೆ. ಬಿಚ್ಚಿ ಕೆದರಿದ ನಿನ್ನ ಮುಡಿಯನ್ನು ಕಟ್ಟುತ್ತೇನೆ. ಅಣ್ಣನ ಮಾತನ್ನೂ ಭೀಷ್ಮರ ಮಾತನ್ನೂ ತಳ್ಳಿಹಾಕುತ್ತೇನೆ. ಸಂಧಿಗೆ ಅವಕಾಶ ಕೊಡುವುದಿಲ್ಲ.”

ರನ್ನ ಗದಾಯುದ್ಧವನ್ನು ಮೊದಲು ನಾಟಕವಾಗಿ ಬರೆದು, ಆಮೇಲೆ ಅದನ್ನು ಕಾವ್ಯವಾಗಿ ತಿರುಗಿಸಿದನೆಂದು ಕಾಣುತ್ತದೆ. ಈ ಸಂಭಾಷಣೆ ಮುಗಿದ ಮೇಲೆ ವಿದೂಷಕನ ಮಾತೂ ಬರುತ್ತದೆ. ಕಂಚುಕಿಯಂತೆ, ವಿದುಷಕ ನಾಟಕಗಳಲ್ಲಿ ಮಾತ್ರ ಬರುವ ಪಾತ್ರ, ಹಾಸ್ಯದ ಪಾತ್ರ ಅವನು ಹೇಳಿದ.

“ಇನ್ನೆಲ್ಲಿಯ ಧೃತರಾಷ್ಟ್ರ! ಎಲ್ಲಿಯ ಭೀಷ್ಮ! ಎಲ್ಲಿಯ ಸಂಧಿಕಾರ್ಯ! ನಮ್ಮ ಭೀಮ ನೂರುಮಂದಿ ಕೌರವರನ್ನು ಕೊಂದಿಕ್ಕಿದ. ಉಳಿದಿರುವ ದುರ್ಯೋಧನನೊಬ್ಬನನ್ನು ಕೊಲ್ಲುವುದೂ ಗೆಲ್ಲುವುದೂ ನಮ್ಮ ಅರಸಂಗೆ ಅದೇನು ಮಹಾ!” (ಎಂದು ದ್ರೌಪದಿಯ ಮುಖವನ್ನು ನೋಡಿ) “ಅದಕ್ಕೆ ಯೋಚಿಸಬೇಡಮ್ಮಾ! ನೀನು ಸಾಮಾನ್ಯಳೆ? ಕುರುಕುಲವನ್ನು ನುಂಗಿನೀರು ಕುಡಿದೆ!’ ಕುರುಪತಿಯನ್ನೂ ನುಂಗಲಿದ್ದೀಯೆ. ನಮ್ಮ ಅರಸ ಎರಡನೆ (ಯ) ಹಿಡಿಂಬೆಯಾದ ನಿನ್ನನ್ನು ಎಲ್ಲಿ ತಂದನೋ ಕಾಣೆ!”

ಹೀಗೆ, ಅಳುತ್ತ ಬಂದ ತನ್ನನ್ನು ನಗುವಂತೆ ಮಾಡಿದ ವಿದೂಷಕನ ಪರಿಹಾಸದಿಂದ ದ್ರೌಪದಿ ಸಂತೋಷಗೊಂಡು ಹಿಂದಿರುಗುತ್ತಾಳೆ.

ಮುಂದಿನ ದೃಶ್ಯ ರಣರಂಗದಲ್ಲಿ, ಭೀಷ್ಮರು ಬಾಣಗಳ ಹಾಸಿನಮೇಲೆ ಮಲಗಿದ್ದಾರೆ. ಗುರುದೋಣ, ಮಯ್ದುನ ಜಯದ್ರಥ, ಪ್ರೀತಿಯ ತಮ್ಮ ದುಶ್ಯಾಸನ, ನಚ್ಚಿನ ಬಂಟ ಕರ್ಣ, (ಪಾಂಡವರ) ಸೋದರಮಾವ ಶಲ್ಯ ಇವರೆಲ್ಲರ ಮರಣದಿಂದ ದುಃಖಿತನಾದ ದುರ್ಯೋಧನ, ಅಭಿಮಾನಧನನಾದ ಮಹಾಶೂರ, ಗದೆಯನ್ನು ಹೆಗಲಿಗೇರಿಸಿಕೊಂಡು, ಸಂಜಯನೊಂದಿಗೆ ನಡೆದು ಬರುತ್ತಿದ್ದಾನೆ. ಅಶ್ವತ್ಥಾಮ ದೋಣರು ತಮ್ಮ ಅನ್ನದ ಋಣವನ್ನು ಸರಿಯಾಗಿ ಯುದ್ಧಮಾಡಿ ತೀರಿಸಲಿಲ್ಲ. ಎಂದು ಅವರ ಮೇಲೆ ದುರ್ಯೋಧನನಿಗೆ ಅಪಾರ ಕೋಪ.ಸಂಜಯನು ಅವರ ಪರವಾಗಿ ನುಡಿಯುತ್ತಾನೆ; ಶೂರರಾದ ಪಾಂಡವರ ಮುಂದೆ ಅವರ ಕೈ ನಡೆಯಲಿಲ್ಲ ಎಂದು ಅವನವಾದ. ಸಂಜಯನ ಮಾತು ದುರ್ಯೋಧನನನ್ನು ಇನ್ನಷ್ಟು ಕೆರಳಿಸುತ್ತದೆ. ಪಾಂಡವರನ್ನೂ, “ಅರ್ಜುನನಿಗೆ ಸಾರಿಥಿಯಾಗಿ ಹೊನ್ನೊಂದನೆಯ ’ಸೂತಾವತಾರ’ ಎತ್ತಿದ.” ಎಂದು ಕೃಷ್ಣನನ್ನೂ ತೆಗಳಿ ಮಾತನಾಡುತ್ತಾನೆ. “ನಿನಗೆ ದೈವ ಅನುಕೂಲವಾಗಿಲ್ಲ, ಪಾಂಡವರಿಗೆ ದೈವ ಸಹಾಯವಿದೆ, ಹೆಚ್ಚು ವಿವರಿಸಿ ಪ್ರಯೋಜನವಿಲ್ಲ?” ಎಂದ ಸಂಜಯನ ನುಡಿಗೆ ದುರ್ಯೋಧನ ಬೇಸರಗೊಳ್ಳುತ್ತಾನೆ; ಪಾಂಡವರೊಂದಿಗೆ ಒಬ್ಬೊಂಟಿಗನಾಗಿ ಕಾದಿ ಪೌರಷವನ್ನು ಮೆರೆಯುತ್ತೇನೆ ಎಂದು ತನ್ನ ಹಟವನ್ನೇ ಮುಂದೆ ಮಾಡುತ್ತಾನೆ.

ಸಂಜಯ ಸ್ವಾಮಿಭಕ್ತ; ಈ ಹಟಮಾರಿಯನ್ನು ತಿದ್ದುವುದಾಗದು ಎಂದು ಯೋಚಿಸಿ. “ಬಲರಾಮ, ಅಶ್ವತ್ಥಾಮ, ಕೃಪ, ಕೃತವರ್ಮ, ಇವರಲ್ಲಿ ಒಬ್ಬರಿಗೆ  ಸೇನಾಪತಿ ಪಟ್ಟವನ್ನು ಕಟ್ಟು, ಹಗೆ ತೀರಿಸಿಕೋ” ಎಂದು ಸಲಹೆ ಮಾಡುತ್ತಾನೆ. ಬಲರಾಮ ತೀರ್ಥಯಾತ್ರೆಯಲ್ಲಿದ್ದಾನೆ. ಉಳಿದ ಮೂವರನ್ನು ದುರ್ಯೋಧನ ನಂಬಲಾರ, ಹಗೆ ತೀರುವುದಿದ್ದರೆ ಕರ್ಣನಿಂದ, ದುಶ್ಯಾಸನನಿಮದ ತೀರಬೇಕಿತ್ತು. ತನ್ನಿಂದ ತೀರಿತು. ಬೇರೆಯವರಿಂದ ಸಾಧ್ಯವಿಲ್ಲ. ಇದು ಅವನ ದೃಢವಾದ ಅಭಿಪ್ರಾಯ;

ಈ ವೇಳೆಗೆ, ಮಗನ ಸ್ಥಿತಿಯನ್ನು ಚಾರರಿಂದ ತಿಳಿದ ಧೃತರಾಷ್ಟ್ರ ಗಾಂಧಾರಿಯರು ಮಗನನ್ನು ಸಮಾಧಾನ ಪಡಿಸುವುದಕ್ಕಾಗಿ ರಣರಂಗಕ್ಕೆ ಬರುತ್ತಾರೆ. ಮಡಿದು ಮಲಗಿದ್ದ ದುಶ್ಯಾಸನನನ್ನು ಕಂಡು ಅವರಿಗಾದ ದುಃಖ ಅಷ್ಟಿಷ್ಟಲ್ಲ. ದುರ್ಯೋಧನನೊಬ್ಬನಾದರೂ ಉಳಿದಿರುವನಲ್ಲಾ ಎಂಬುದೇ ಅವರ ಸಮಾಧಾನ. “ಸಂಧಿಗಾಗಿ ಸಂಜಯನನ್ನುಅಟ್ಟುತ್ತೇನೆ, ಸಂಧಿ ಮಾಡಿಕೋ” ಎಂದು ಕರುಡರಾಜ ಧೃತರಾಷ್ಟ್ರನು ಮಗನ ಕಾಲು ಹಿಡಿದು ಬೇಡಿಕೊಂಡರೂ ದುರ್ಯೋಧನನ ಹಟ ಸಡಿಲವಾಗಲಿಲ್ಲ.

“ಅರ್ಜುನನನ್ನೂ ಭೀಮನನ್ನೂ ಕೊಂದು, ಕರ್ಣ ದುಶ್ಯಾಸನರ ಸಾವಿಗೆ ಸೇಡು ತೀರಿಸಿಕೊಂಡು, ಬಳಿಕ ಸಂಧಿ ಮಾಡಿಕೊಳ್ಳುತ್ತೇನೆ, ಧರ್ಮಪುತ್ರನೊಂದಿಗೆ ನಿಮ್ಮ ಸೇವೆ ಮಾಡುತ್ತೇನೆ” ಎಂದು ದುರ್ಯೋಧನ ತಂದೆಗೆ ಉತ್ತರಕೊಡುತ್ತಾನೆ. ’ಹೋಗಲಿ, ಭೀಷ್ಮರ ಸಲಹೆ ಕೇಳಿ ಮುಂದಿನ ಕಾರ್ಯಮಾಡು”, ಎಂದ ತಂದೆಯ ಮಾತಿಗೆ ಒಪ್ಪಿ, ಗದೆಯನ್ನು ಹೊತ್ತು ಭೀಷ್ಮರನ್ನು ಕಾಣುವುದಕ್ಕಾಗಿ ಯುದ್ಧಭೂಮಿಯಲ್ಲಿ ನಡೆದು ಹೋಗುತ್ತಾನೆ.

ಯುದ್ಧ ಭೂಮಿಯಲ್ಲಿ ಭಾರಿ ಹೆಣಗಳ ರಾಶಿ, ಮುರಿದು ಬಿದ್ದ ಆಯುಧಗಳು ಇವನ್ನೆಲ್ಲಾ ಮೆಟ್ಟಿ ಮೆಲ್ಲನೆ ನಡೆದು ಹೋಗುತ್ತಿದ್ದಾನೆ ಕುರುಪತಿ. ಚಕ್ರವರ್ತಿಯಾಗಿದ್ದವನು ಬರಿಗಾಲಿನಲ್ಲಿ ನಡೆಯುವುದನ್ನು ಕಂಡು ಸಂಜಯನಿಗೆ ದುಃಖ. ಕೌರವ ಅವನನ್ನು ಸಂತೈಸಿ, ಧೀರನಾಗಿ ನಡೆದು ಬರುತ್ತಿರುವಾಗ ಹೆಣಗಳನ್ನು ತಿನ್ನುತ್ತಿರುವ ಮರುಳುಗಳು ಕಾಣಿಸುತ್ತವೆ. (ಮರುಳುಗಲು ಯುದ್ಧ ಭೂಮಿಯಲ್ಲಿ ವಾಸಿಸುವ ಪಿಶಾಚಗಳು.) ಒಂದು ಹುಲುಮರುಳು ದುರ್ಯೋಧನನನ್ನು ಹಂಗಿಸುತ್ತದೆ.

“ಗುರು ದ್ರೋಣರ ರಕ್ತ ಕುಡಿಯೋಣವೆಂದರೆ, ಅವನು ಬ್ರಾಹ್ಮಣ. ನಿನ್ನ ತಮ್ಮ ದುಶ್ಯಾಸನನ ನೆತ್ತರು ಕುಡಿಯೋಣವೆಂದರೆ, ಭೀಮನೇ ಹೀರಿಬಿಟ್ಟಿದ್ದಾನೆ; ಭೀಷ್ಮನ ನೆತ್ತರು ಕುಡಿಯೋಣವೆಂದರೆ, ಅವನು ಇನ್ನೂ ಬದುಕಿದ್ದಾನೆ. ಕುರುರಾಜ, ನಿನ್ನ ನೆತ್ತರನ್ನು ಸವಿನೋಡಲು ಬಯಸಿ ಉಬ್ಬಿಹೋಗಿದ್ದೇನೆ.”

ಮರುಳು ಹೀಗೆ ಎನ್ನುತ್ತಿರುವಾಗಲೇ, ಕೌರವ ಕಾಲು ಜಾರಿ ಬೀಳುತ್ತಾನೆ. ಸಂಜಯ ಅವನನ್ನು  ಎತ್ತಿಹಿಡಿದು, “ತೊಡೆ ಮರಿಯಲಿಲ್ಲ ತಾನೆ” ಎಂದು ಕೇಳುತ್ತಾನೆ. ಆಗ ಆ ಹುಲುಮರುಳು, “ಭೀಮಕೋಪದಿಂದ ನಿನ್ನ ತೊಡೆ ಮುರಿಯದೆ ಇರುತ್ತದೆಯೆ? ಮುರಿದೇ ಮುರಿಯುತ್ತದೆ” ಎಂದು ಲೇವಡಿಮಾಡುತ್ತದೆ. ಆಗ, ಧುರ್ಯೋಧನನಿಗೆ ಹಿಂದೆ ತನ್ನಿಂದ ಅಪಮಾನಿತರಾಗಿದ್ದ ಮೈತ್ರೇಯರು ಕೊಟ್ಟ ಶಾಪದ ನೆನಪಾಗುತ್ತದೆ. ’ಮರುಳಿನ ಮಾತಿನಲ್ಲಿ ಹುರುಳೇನು?’ ಎಂದು ಕೌರವ ಉದಾಸೀನತೆಯಿಂದ ಮುನ್ನಡೆಯುತ್ತಾನೆ.

ರನ್ನ ಈ ಮರುಳಿನ ಪ್ರಸಂಗವನ್ನು ತಂದೊಡ್ಡಿ, ಬಹು ಚಮತ್ಕಾರದಿಂದ ಮುಂದಾಗುವುದನ್ನು ಸೂಚಿಸಿದ್ದಾನೆ. ಧುರ್ಯೋಧನನ ಕೋಪ ಹೆಚ್ಚುವಂತೆ ಮಾಡಿದ್ದಾನೆ. ಗದಾಯುದ್ಧ ನಡೆದೇ ತೀರುತ್ತದೆ.

ಯುದ್ಧಭೂಮಿಯಲ್ಲಿ ಕೌರವನು ತನ್ನ ಕಡೆಯವರು ಮಡಿದು ಬಿದ್ದಿರುವುದನ್ನು ನೋಡುತ್ತಾ, ಪ್ರತಿಯೊಬ್ಬ ವೀರನಿಗೂ ತನ್ನ ಕಣ್ಣೀರಿನ ಕಾಣಿಕೆಯನ್ನು ಸಲ್ಲಿಸುತ್ತಾ ಕರ್ಣನ ಬಳಿ ಬಂದಾಗ ಅವನ ಧೈರ್ಯದ ಕಟ್ಟೆ ಒಡೆದು ದುಃಖದ ಕೋಡಿ ಹರಿಯುತ್ತದೆ. ಈ ಸನ್ನಿವೇಶದಲ್ಲಿ ಕೌರವನ ಬಾಯಿಂದ ರನ್ನ ಹೇಳಿಸಿರುವ ಪದಗಳು ಕರ್ಣ ದುರ್ಯೋಧನರ ದಿವ್ಯ ಸ್ನೇಹದ ಚಿತ್ರವನ್ನು ನಮ್ಮ ಕಣ್ಣ ಮುಂದೆ ತರುತ್ತವೆ; ದುರ್ಯೋಧನನಲ್ಲಿ ನಮಗೆ ಮರುಕವುಂಟಾಗುತ್ತದೆ; ಗೌರವ ಹುಟ್ಟುತ್ತದೆ. ಕವಿ ರತ್ನನ ಆ ಪದ್ಯರತ್ನಗಳಲ್ಲಿ ಯಾವುದನ್ನು ಎತ್ತಿ ಬರೆಯುವುದು, ಯಾವುದನ್ನು ಬಿಡುವುದು? ಒಂದು ಪದ್ಯ ಸಾಲದೆ, ರನ್ನನ ಕವಿತಾ ಶಕ್ತಿಯನ್ನು – ಪರೀಕ್ಷಿಸುವುದಕ್ಕಲ್ಲ, ಅರಿಯುವುದಕ್ಕೆ?

ನೀನುಳ್ಳೊಡೆ ಉಂಟು ರಾಜ್ಯಂ,

ನೀನುಳ್ಳೊಡೆ ಪಟ್ಟುಮುಂಟು,

ಬೆಳ್ಗೊಡೆಯುಂಟಯ್;

ನೀನುಳ್ಳೊಡೆ ಉಂಟು ಪೀಳಿಗೆ;

ನೀನಿಲ್ಲದೆ ಇವೆಲ್ಲಂ ಒಳವೆ, ಅಂಗಾಧಿಪತೀ?

ನೀನು ಇದ್ದರೆ ಮಾತ್ರ ರಾಜ್ಯ, ಪಟ್ಟ, ಬಿಳಿಯ ಕೊಡೆ ಎಲ್ಲ. ನೀನಿಲ್ಲದ ಮೇಲೆ, ಇವೆಲ್ಲ ಇದ್ದರೇನು ಇಲ್ಲದಿದ್ದರೇನು? ಎಂದು ಅಂಗರಾಜ್ಯದ ರಾಜನಾಗಿದ್ದ ಕರ್ಣನ ಶವವನ್ನು ನೋಡುತ್ತಾ ಹೇಳುತ್ತಾನೆ. ನೆಲಕ್ಕಾಗಿ ಅಲ್ಲ, ಛಲಕ್ಕಾಗಿ ಯುದ್ಧಮಾಡಲು ನಿಶ್ಚಯಿಸುವನು. 


ನೀನಿಲ್ಲದೆ ಇವೆಲ್ಲಂ ಒಳವೆ, ಅಂಗಾಧಿಪತೀ?

ಬಲರಾಮ ಬರುವವರೆಗೆ ನೀನು ಕೊಳದಲ್ಲಿ ಅಡಗಿಕೊಂಡಿರು ಎಂದು ಭೀಷ್ಮರು ಧುರ್ಯೋಧನನಿಗೆ ಜನ ಮಂತ್ರವನ್ನು ಉಪದೇಶಿಸಿಸುವರು. ಕೌರವ ಹಾಗೆಯೇ ಮಾಡುವನು. ಪಾಂಡವರು ಕೌರವನನ್ನು ಹುಡುಕಿಕೊಂಡು ಬರುವರು. ಅವನು ಕೊಳದಲ್ಲಿರುವುದು ಗೊತ್ತಾಗುವುದು. ಭೀಮನ ಮೂದಲಿಕೆಯ ನುಡಿಗಳನ್ನು ಕೇಳಿ ನೀರೊಳಗಿದ್ದರೂ ಕೌರವ ಬೆವತನಂತೆ! ಅಷ್ಟು ಕೋಪ ಉಕ್ಕಿತು! ಇನ್ನು ಕೇಳಬೇಕೆ? ಅವನು ಗದಾಸಹಿತನಾಗಿ ಹೊರಕ್ಕೆ ನೆಗೆದುಬಂದ.

ಭೀಮ ದುರ್ಯೋಧನರಿಗೆ ಗದಾಯುದ್ಧ ನಡಿಯಿತು. ಗದಾಯುದ್ಧದಲ್ಲಿ ತೊಡೆಗೆ ಹೊಡೆಯಬಾರದು. ಆದರೂ, ಕೃಷ್ಣ ತೊಡೆ ತಟ್ಟಿ ಸನ್ನೆಮಾಡಿದ; ಭೀಮ ಕೌರವನ ತೊಡೆಗೇ ಹೊಡೆದ! ಕೌರವ ನೆಲಕ್ಕುರುಳಿಬಿದ್ದ. ಭೀಮ ಅವನ ಕಿರೀಟವನ್ನು ಒದೆದು. ದೌಪ್ರದಿಯ ಮುಡಿಯನ್ನು ಕಟ್ಟಿ, ತನ್ನ ಪ್ರತಿಜ್ಞೆಗಳನ್ನು ತೀರಿಸಿಕೊಂಡ. ಸಾಹಸಭೀಮ ವಿಜಯ! ಸಾಹಸಭೀಮನಿಗೆ ಪಟ್ಟಾಭಿಷೇಕ!

ಕಥಾನಾಯಕನೇನೋ ಸಾಹಸಭೀಮನೆ. ಆದರೆ, ಈ ಕೃತಿ ರತ್ನದಲ್ಲಿ ನಮ್ಮ ಮೆಚ್ಚುಗೆಯನ್ನೂ ಮರುಕವನ್ನೂ ಸೆಳೆದುಕೊಂಡು ನಾಯಕರತ್ನವಾಗಿ ಮೆರೆಯುವವನು ದುರ್ಯೋಧನ.


ಕವಿತಾ ಸಾಮ್ರಾಜ್ಯಂ ತಾಳ್ದಿದುನ್ನತಿಯಿಂದಂ-

         ಚಾಲುಕ್ಯ ಚಕ್ರವರ್ತಿ ತೈಲಪ ರನ್ನನಿಗೆ ಕವಿ ಚಕ್ರವರ್ತಿ ಪದವಿ ತನಗೆ ಹೇಗೆ ಒಪ್ಪುತ್ತದೆ ಎಂಬುದನ್ನು ’ಅಜಿತಪುರಾಣ’ದಲ್ಲಿ ರನ್ನ ಹೀಗೆ ವರ್ಣಿಸಿದ್ದಾನೆ; ’ಬುದ್ಧಿಯೆ (ಹಣಕಾಸಿನ) ಭಂಡಾರ; ಪದವಿದ್ಯೆ (ವ್ಯಾಕರಣ ಶಾಸ್ತ್ರದ  ಜ್ಞಾನ) ಕತ್ತಿನ ಹಾರ; ಯಶಸ್ಸು ಬಿಳಿಯ ಛತ್ರಿ; ಸರಸ್ವತಿಯೇ ಮಹಾರಾಣಿ; ಪದ್ಯ ರಚನೆಯ ಶೈಲಿ ಭೇರೀನಾದ; ಪಾಂಡಿತ್ಯವೇ ಸಿಂಹಾಸನ; ಕಾವ್ಯದ ಅಲಂಕಾರವೇ ಬೀಸುವ ಚಾಮರ; (ಈ ಚಕ್ರವರ್ತಿ ಪದವಿಯ ಚಿಹ್ನೆಗಳಿಂದ ಕೂಡಿದ) ಕವಿತಾ ಸಾಮ್ರಾಜ್ಯವನ್ನು ಹೊಂದಿರುವ ಮೇಲ್ಮೆಯಿಂದ ರನ್ನನಿಗೆ ಕವಿಚಕ್ರವರ್ತಿ ಎಂಬ ಹೆಸರು ಚೆನ್ನಾಗಿ ಒಪ್ಪಿದೆ’.

                  ರನ್ನನ ಈ ಮಾತಿನಿಂದ ಅವನು ತನ್ನ ಕವಿತಾಶಕ್ತಿಯಲ್ಲಿ ಹೊಂದಿದ್ದ ನಂಬಿಕೆ ಎಷ್ಟು ಎಂಬುದು ಗೊತ್ತಾಗುತ್ತದೆ. ಕವಿಚಕ್ರವರ್ತಿ ಎಂಬ ಬಿರುದನ್ನು ಕೊಟ್ಟು ಗೌರವಿಸದ್ದಕ್ಕಾಗಿ ರನ್ನ ತೈಲಪನ ಚಕ್ರವರ್ತಿಗೆ ಕೃತಜ್ಞನಾಗಿದ್ದನೆ. ಒಂದು ವೇಳೆ ಬಿರುದನ್ನು ಕೊಡದಿದ್ದರೂ ಕವಿತಾ ಸಾಮ್ರಾಜ್ಯಕ್ಕೆ ತಾನು ಚಕ್ರವರ್ತಿ ಎಂಬ ಆತ್ಮವಿಶ್ವಾಸ ರನ್ನನಿಗಿದ್ದಿತು. ಆತ್ಮ ವಿಶ್ವಾಸವಿಲ್ಲದ ಕವಿ ಶ್ರೇಷ್ಠವಾದ ಕಾವ್ಯವನ್ನು ರಚಿಸಲಾರನು.

****** ಮಾಹಿತಿ ಕೃಪೆ: ಕಣಜ, ವಿಕಿಪೀಡಿಯಾ*****




'ಛಲಮೆನೆ ಮೆಱೆವೆಂ' ಪದ್ಯಭಾಗದ ಸಾರಾಂಶ

ಪೀಠಿಕೆ: ಮಹಾಭರತ ಯುದ್ದದಲ್ಲಿ ತನ್ನೆಲ್ಲ ಸಹೋದರರನ್ನೂ ಆಪ್ತಮಿತ್ರನಾದ ಕರ್ಣನನ್ನೂ ಕಳೆದುಕೊಂಡ ದುರ್ಯೋಧನನು ತನ್ನ ತಂದೆ ತಾಯಿಯರ ಅಪೇಕ್ಷೆಯಂತೆ ರಣರಂಗದಲ್ಲಿ ಶರಶಯ್ಯೆಯಲ್ಲಿ ಮಲಗಿದ್ದ ತಾತ ಭೀಷ್ಮರ ಸಲಹೆಯನ್ನು ಪಡೆಯಲು ಬರುತ್ತಾನೆ. ಭೀಷ್ಮರು ಯುದ್ಧವನ್ನು ನಿಲ್ಲಿಸಿ ಪಾಂಡವರೊಡನೆ ಸಂಧಿ ಮಾಡಿಕಒಳ್ಳುವುದು ಸೂಕ್ತವೆಂದು ದುರ್ಯೋಧನನಿಗೆ ಸಲಹೆ ನೀಡುತಾರೆ. ಆದರೆ ಸಂಧಿಮಾಡಿಕೊಳ್ಳು ಒಪ್ಪದ ದುರ್ಯೋಧನನು ತಾನು ಯುದ್ಧಮಾಡುವುದಾಗಿ ಹೇಳುತ್ತಾನೆ.

       ಈ ಸಂದರ್ಭದಲ್ಲಿ ದುರ್ಯೋಧನನು ಭೀಷ್ಮರೊಂದಿಗೆ ಮಾತನಾಡುವಾಗ ಆತನಲ್ಲಿ ಛಲ, ಅವನ ದೃಢನಿರ್ಧಾರ ಮತ್ತು ಅವನ ಅಭಿಮಾನದ ಮಾತುಗಳನ್ನು ಇಲ್ಲಿ ಸಂಗ್ರಹಿಸಿ ಕೊಡಲಾಗಿದೆ.

********

ವಚನ : ಇಂಬುಕೆಯ್ವೆಯಪ್ಪೊಡೆ ಪಾಂಡವರನೊಡಂಬಡಿಸಿ ಸಂಧಿಯಂ ಮಾಡಿ ಪೂರ್ವಕ್ರಮದೊಳ್ ನಡೆವಂತು ಮಾೞ್ಪೆಂ ಇನ್ನುಮವರೆಮ್ಮಂದುದಂ ಇಂಬುಕೆಯ್ಯದವರ್ ಮೀಱವರಲ್ಲ ನೀನುಮೆಮ್ಮ ಪೇೞ್ದುದಂ ಮೀಱದೆ ನೆಗೞಲ್ವೇೞ್ಕುಮೆನೆ ಸುಯೋಧನಂ ಮುಗುಳ್ನಗೆ ನಕ್ಕು-

ಸಾರಾಂಶ: ನೀನು ಒಪ್ಪುವೆಯಾದರೆ ಪಾಂಡವರನ್ನು ಒಪ್ಪಿಸಿ ಒಪ್ಪಂದ ಮಾಡಿ ಹಿಂದಿನಂತೆ ನಡೆಯುವ ಹಾಗೆ ಮಾಡುವೆನು. ಈಗಲೂ ಕೂಡ ಅವರು ನಮ್ಮ ಮಾತನ್ನು ಮೀರದೆ ಪಾಲಿಸುತ್ತಾರೆ. ನೀನೂ ಕೂಡ ನಮ್ಮ ಮಾತನ್ನು ಮೀರದೆ ನಡೆದುಕೊಳ್ಳಬೇಕು. ಎಂದು ಭೀಷ್ಮರು ಹೇಳಿದಾಗ ದುರ್ಯೋಧನನು ಮುಗುಳು ನಗೆ ನಕ್ಕು-


ಕಂ|| ನಿಮಗೆ ಪೊಡೆಮಟ್ಟು ಪೋಪೀ|

ಸಮಕಟ್ಟಿಂ ಬಂದೆನಹಿತರೊಳ್ ಸಂಧಿಯನೇಂ||

ಸಮಕೊಳಿಸಲೆಂದು ಬಂದೆನೆ|

ಸಮರದೊಳೆನಗಜ್ಜ ಪೇೞಮಾವುದು ಕಜ್ಜಂ||  ||೧||

ಸಾರಾಂಶ: ನಿಮಗೆ  ನಮಸ್ಕರಿಸಿ ಹೋಗಲೆಂದು ಬಂದೆನೇ ಹೊರತು ಶತ್ರುಗಳೊಡನೆ ಒಪ್ಪಂದವನ್ನು ಏರ್ಪಡಿಸುವುದಕ್ಕೆಂದು ಬಂದೆನೆ? ಅಜ್ಜಾ, ಯುದ್ಧದಲ್ಲಿ ಇನ್ನು ನನ್ನ ಕಾರ್ಯವೇನೆಂಬುದನ್ನು ಹೇಳಿರಿ.


ಕಂ|| ನೆಲಕಿಱವೆನೆಂದು ಬಗೆದಿರೆ|

ಚಲಕಿಱವೆಂ ಪಾಂಡುಸುತರೊಳೀನೆಲನಿದು ಪಾ||

ೞ್ನೆಲನೆನಗೆ ದಿನಪಸುತನಂ|

ಕೊಲಿಸಿದ ನೆಲನೊಡನೆ ಮತ್ತೆ ಪುದುವಾೞ್ದಪೆನೇ||     ||೨||

ಸಾರಾಂಶ: ನಾನು ಭೂಮಿಗಾಗಿ ಹೋರಾಡುವೆನೆಂದು ಭಾವಿಸಿದಿರಾ? ಛಲಕ್ಕಾಗಿ ಪಾಂಡವರೊಡನೆ ಹೋರಾಡುವೆನು. ಈ ಭೂಮಿ ನನಗೆ ಪಾಳು ಭೂಮಿ. ದಿನಪಸುತನಾದ ಕರ್ಣನನ್ನು ಕೊಲ್ಲಿಸಿದ ಈ ಭೂಮಿಯೊಡನೆ ನಾನು ಮತ್ತೆ ಬಾಳುವೆನೆ?


ಉ|| ಎನ್ನಣುಗಾಳನೆನ್ನಣುಗದಮ್ಮನನಿಕ್ಕಿದ ಪಾರ್ಥಭೀಮರು|

ಳ್ಳನ್ನೆಗಮೊಲ್ಲೆನೆನ್ನೊಡಲೊಳೆನ್ನಸುವುಳ್ಳಿನಮಜ್ಜ ಸಂಧಿಯಂ||

ಮುನ್ನಮವಂದಿರಿರ್ಬರುಮನಿಕ್ಕುವೆನಿಕ್ಕಿ ಬೞಕ್ಕೆ ಸಂಧಿಗೆ|

ಯ್ವೊನ್ನೆಗೞ್ದಂತಕಾತ್ಮಜನೊಳೆನ್ನೞಲಾಱದೊಡಾಗದೆಂಬೆನೇ||   ||೩||

ಸಾರಾಂಶ: ನನ್ನ ಪ್ರೀತಿಯ ಗೆಳೆಯನನ್ನು(ಕರ್ಣನನ್ನು) ನನ್ನ ಪ್ರೀತಿಯ ತಮ್ಮನನ್ನು(ದುಶ್ಯಾಸನ) ಕೊಂದ ಅರ್ಜುನ-ಭೀಮರು ಬದುಕಿರುವವರೆಗೆ ನನ್ನ ದೇಹದಲ್ಲಿ ಪ್ರಾಣ ಇರುವವರೆಗೂ ಅಜ್ಜಾ, ನಾನು ಸಂಧಿಯನ್ನು ಒಪ್ಪುವುದಿಲ್ಲ. ಮೊದಲು ಆ ಇಬ್ಬರನ್ನೂ ಕೊಲ್ಲುವೆನು. ಅವರನ್ನು ಕೊಂದ ಬಳಿಕ ಧರ್ಮರಾಜನೊಡನೆ ಸಂಧಿಮಾಡಿಕೊಳ್ಳುತ್ತೇನೆ. ನನ್ನ ದುಃಖ ಆರಿದ ನಂತರ ಸಂಧಿ ಆಗುವುದಿಲ್ಲ ಎನ್ನುವೆನೇ?


ಕಂ|| ಪುಟ್ಟಿದ ನೂರ್ವರುಮೆನ್ನೊಡ|

ವುಟ್ಟಿದ ನೂರ್ವರುಮಿದಿರ್ಚಿ ಸತ್ತೊಡೆ ಕೋಪಂ||

ಪುಟ್ಟಿ ಪೊದೞ್ದುದು ಸತ್ತರ್

ಪುಟ್ಟರೆ ಪಾಂಡವರೊಳಿಱದು ಛಲಮನೆ ಮೆಱೆವೆಂ ||   ||೪||

ಸಾರಾಂಶ: ಹುಟ್ಟಿದ ನೂರು ಜನರೂ, ನನ್ನ ಒಡ ಹುಟ್ಟಿದ ನೂರುಮಂದಿ ಸಹೋದರರು (ಯುದ್ಧದಲ್ಲಿ) ಹೋರಾಡಿ ಸತ್ತರು. ಆದ್ದರಿಂದ ನನ್ನಲ್ಲಿ ಕೋಪ ಹುಟ್ಟಿ ಬೆಳೆಯಿತು(ಪೊದೞ್ದುದು). ಸತ್ತವರೇನು ಮತ್ತೆ ಹುಟ್ಟುವುದಿಲ್ಲವೇ? ಪಾಂಡವರೊಡನೆ ಹೋರಾಡಿ ನನ್ನ ಛಲವನ್ನೇ ಮೆರೆಯುತ್ತೇನೆ.


ಕಂ|| ಕಾದದಿರೆನಜ್ಜ ಪಾಂಡವ|

ರಾದರ್ ಮೇಣಿಂದಿನೊಂದೆ ಸಮರದೊಳಾಂ ಮೇ||

ಣಾದೆನದಱಂದೆ ಪಾಂಡವ

ರ್ಗಾದುದು ಮೇಣಾಯ್ತು ಕೌರವಂಗವನಿತಳಂ||       ||೫||

ಸಾರಾಂಶ: ಅಜ್ಜ, ನಾನು ಹೋರಾಡದೆ ಬಿಡುವುದಿಲ್ಲ. ಇಂದಿನ ಯುದ್ಧದಲ್ಲಿ ಪಾಂಡವರು ಉಳಿಯಬೇಕು ಇಲ್ಲವೆ ನಾನು ಉಳಿಯಬೇಕು. ಆದ್ದರಿಂದ ಈ ಭೂಮಿ ಪಾಂಡವರದಾಗಬೇಕು ಇಲ್ಲವೇ ಕೌರವನದಾಗಬೇಕು ಎಂದು ದುರ್ಯೋಧನನು ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮಾಚಾರ್ಯರಿಗೆ ಹೇಳಿದನು.